ಥಾಣೆ(ಮಹಾರಾಷ್ಟ್ರ): ಅಪ್ರಾಪ್ತೆಯ ಮೇಲೆ 33 ಜನರು ಅತ್ಯಾಚಾರವೆಸಗಿರುವ ದುಷ್ಕೃತ್ಯ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಪ್ರಕರಣದಲ್ಲಿ ಈಗಾಗಲೇ 23 ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ 10 ಜನರಿಗಾಗಿ ಶೋಧ ಮುಂದುವರೆದಿದೆ.
ಥಾಣೆಯ ಡೊಂಬಿವಿಲಿ ಪ್ರದೇಶದಲ್ಲಿ ಘಟನೆ ನಡೆದಿದೆ. ಆರೋಪಿಗಳು ಡೊಂಬಿವಿಲಿ, ಬದ್ಲಾಪುರ, ರಬಾಲೆ ಮತ್ತು ಮುರ್ಬಾದ್ನವರು ಎನ್ನಲಾಗಿದೆ. ಇವರು ಬೇರೆ ಬೇರೆ ರಾಜಕೀಯ ಪಕ್ಷಗಳ ಹಿನ್ನೆಲೆ ಉಳ್ಳವರು ಎಂದು ಗೊತ್ತಾಗಿದೆ. ಕಳೆದ 9 ತಿಂಗಳಿಂದ ನಿರಂತರವಾಗಿ ಈ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ವರದಿಯಾಗಿದೆ. ನಿನ್ನೆಯಷ್ಟೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ: ಪೆಗಾಸಸ್ ಗೂಢಚರ್ಯೆ ಪ್ರಕರಣ: ತನಿಖೆಗೆ ಸಮಿತಿ ರಚಿಸಲು ಸುಪ್ರೀಂಕೋರ್ಟ್ ಅಸ್ತು
ಲಭ್ಯವಾಗಿರುವ ಮಾಹಿತಿ ಪ್ರಕಾರ, ಅಪ್ರಾಪ್ತೆಗೆ ಬೇರೆ ವ್ಯಕ್ತಿಯ ಜೊತೆ ಅಕ್ರಮ ಸಂಬಂಧವಿತ್ತಂತೆ. ಆಕೆಯ ಅಶ್ಲೀಲ ವಿಡಿಯೋವನ್ನು ಆತ ಸೆರೆ ಹಿಡಿದಿದ್ದ. ಈ ವಿಡಿಯೋ ಇಟ್ಟುಕೊಂಡು ಬಾಲಕಿಗೆ ಬ್ಲ್ಯಾಕ್‌ಮೇಲ್ ಮಾಡಿ, 33 ಜನರು ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.