ಬಟಿಂಡಾ(ಪಂಜಾಬ್): ಸರ್ಕಾರಿ ಉದ್ಯೋಗದಿಂದ ನಿವೃತ್ತಿ ಹೊಂದಿದ ವ್ಯಕ್ತಿಯೊಬ್ಬರು ತಮ್ಮದೇ ಪ್ರಕರಣದಲ್ಲಿ ವಾದಿಸಲು ಅನುಭವಿಸಿದ ತೊಂದರೆಯಿಂದಾಗಿ 68 ನೇ ವಯಸ್ಸಿನಲ್ಲಿ ಕಾನೂನು ಅಧ್ಯಯನ ಮಾಡಿ ವಕೀಲರಾಗಿ ಸೇವೆ ಆರಂಭಿಸಿದ್ದಾರೆ.
ಇಳಿವಯಸ್ಸಿನಲ್ಲಿ ಕಾನೂನು ಪದವಿ ಪಡೆದು ವಕೀಲಿ ವೃತ್ತಿ ಆರಂಭಿವಿಸಿದ ವ್ಯಕ್ತಿ ಹೆಸರು ಪ್ರಶೋತ್ತಮ್ ಬನ್ಸಾಲ್. ಇವರು ಪಂಜಾಬ್ನ ಬಟಿಂಡಾ ನಿವಾಸಿ. ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ತೋರಿಸಿಕೊಟ್ಟಿರುವ ಬನ್ಸಾಲ್ 68 ರ ಪ್ರಾಯದಲ್ಲಿ ಕಾನೂನು ನಿಯಮಗಳನ್ನು ಕರಗತ ಮಾಡಿಕೊಂಡಿದ್ದಾರೆ.
ತಮ್ಮದೇ ಕೇಸ್ಗಾಗಿ ಲಾ ಓದಿದರು: 2016 ರಲ್ಲಿ ಸರ್ಕಾರಿ ಕೆಲಸದಿಂದ ನಿವೃತ್ತರಾದ ಬನ್ಸಾಲ್ ತಮ್ಮದೇ ಯಾವುದೋ ಪ್ರಕರಣದಲ್ಲಿ ವಾದಿಸುವಲ್ಲಿ ಕಾನೂನು ತೊಡಕು ಅನುಭವಿಸಿದರು. ಇದನ್ನು ನೀಗಿಸಿಕೊಳ್ಳಲು ಮನಸ್ಸು ಮಾಡಿದ ಅವರು, 2019 ರಲ್ಲಿ ಪಟಿಯಾಲಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಬಳಿಕ ವಕೀಲರ ಸಂಘದಿಂದ ವಾದಿಸಲು ಪರವಾನಗಿಯನ್ನೂ ಪಡೆದರು. ಈಗ ಪೂರ್ಣ ವಕೀಲರಾಗಿ ಕೋರ್ಟ್ನಲ್ಲಿ ವಾದಿಸಲು ಶುರು ಮಾಡಿದ್ದಾರೆ. ನಕಲಿ ಟ್ರಾವೆಲ್ ಏಜೆನ್ಸಿಗಳ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿ, ಕಾನೂನು ಹೋರಾಟ ಆರಂಭಿಸಿದ್ದಾರೆ.
"ಪ್ರತಿಯೊಬ್ಬ ವ್ಯಕ್ತಿಯೂ ಕಾನೂನಿನ ಬಗ್ಗೆ ಮಾಹಿತಿ ಹೊಂದಿರಬೇಕು. ಇದು ಜೀವನಕ್ಕೆ ಅಗತ್ಯ. ನಾನು ಈ ವಯಸ್ಸಿನಲ್ಲಿ ಕಾನೂನು ಅಧ್ಯಯನಕ್ಕೆ ಪ್ರವೇಶ ಪಡೆದಾಗ ಯುವ ವಿದ್ಯಾರ್ಥಿಗಳು ಸಹಕರಿಸಲಿಲ್ಲ. ಕ್ರಮೇಣ ಅವರು ನನ್ನೊಂದಿಗೆ ಹೊಂದಿಕೊಂಡರು. ನ್ಯಾಯ ಪಡೆಯುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕಾಗಿದ್ದು, ಅವರ ಸಾಕಾರ ಮಾಡಿಕೊಳ್ಳಲು ಕಾನೂನು ತಿಳಿದಿರಬೇಕು" ಎಂಬುದು ಬನ್ಸಾಲ್ ಅವರ ಮಾತು.
ಇದನ್ನೂ ಓದಿ: 17 ವರ್ಷದ ಬಳಿಕ ಪಾಕ್ ಜೈಲಿಂದ ಮರಳಿ ತಾಯ್ನಾಡಿಗೆ..; ಮನೆಯಲ್ಲಿ 'ದೀಪಾವಳಿ', ಆನಂದಭಾಷ್ಪ!