ನವದೆಹಲಿ: ದೇಶಾದ್ಯಂತ ಸದ್ಯ ತಂಪು ವಾತಾವರಣ. ಹಲವೆಡೆ ಮಂಜು ಕವಿದ ವಾತಾವರಣ ಸೃಷ್ಟಿಯಾಗಿದ್ದು, ಮೈಕೊರೆಯುವ ಚಳಿಗೆ ಜನಸಾಮಾನ್ಯರು ತತ್ತರಿಸಿದ್ದಾರೆ. ದೆಹಲಿ - ಎನ್‌ಸಿಆರ್ ಪ್ರದೇಶದಲ್ಲಿ ಇಂದು ಮುಂಜಾನೆ ದಟ್ಟ ಮಂಜಿನ ವಾತಾವರಣ ಸೃಷ್ಟಿಯಾಗಿತ್ತು. ರಾಷ್ಟ್ರ ರಾಜಧಾನಿಯಲ್ಲಿನ ತಾಪಮಾನ ಸುಮಾರು 7 ಡಿಗ್ರಿಗೆ ಕುಸಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದೆಹಲಿಯ ಇಂಡಿಯಾ ಗೇಟ್, ಸರಾಯ್ ಕಲೇ ಖಾನ್, ಏಮ್ಸ್, ಸಫ್ದರ್‌ಜಂಗ್ ಮತ್ತು ಆನಂದ್ ವಿಹಾರ್ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಗೋಚರತೆ ಬಹಳ ಕಡಿಮೆ ಪ್ರಮಾಣದಲ್ಲಿತ್ತು. ದಟ್ಟ ಮಂಜಿನ ವಾತಾವರಣ ಸೃಷ್ಟಿಯಾದ ಹಿನ್ನೆಲೆ, ಗೋಚರತೆ ಕಡಿಮೆ ಆಗಿತ್ತು. ಮಧ್ಯರಾತ್ರಿ ಚಳಿ ತೀವ್ರಗೊಂಡ ಹಿನ್ನೆಲೆ ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳಲ್ಲಿ ನಿವಾಸಿಗಳು ರಾತ್ರಿ ತಂಗುದಾಣ (ನೈಟ್ ಶೆಲ್ಟರ್) ನಲ್ಲಿ ಆಶ್ರಯ ಪಡೆದರು.
ಇಂದು ಬೆಳಗ್ಗೆ ಐ.ಎಂ.ಡಿ. ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿನ ಮಂಜಿನ ವಾತಾವರಣವುಳ್ಳ ಸ್ಯಾಟಲೈಟ್ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಯುಪಿಯ ಮೊರಾದಾಬಾದ್, ಕಾನ್ಪುರದ ಫೋಟೋಗಳು ದಟ್ಟ ಮಂಜಿನ ಪದರ ಹೊಂದಿತ್ತು. ಗೋಚರತೆ ಬಹುತೇಕ ಶೂನ್ಯ ಹಂತಕ್ಕೆ ತಲುಪಿದಂತೆ ತೋರಿದೆ.
ಮಬ್ಬಿನ ವಾತಾವರಣದಿಂದ ರಸ್ತೆಯನ್ನು ನೋಡುವುದೇ ಕಷ್ಟವಾಗಿದೆ. ಎಂದಿನಂತೆ ಇಂದು ಬೆಳಗ್ಗೆ ವಾಹನ ಸವಾರರ ಸಂಖ್ಯೆ ತೀರಾ ಕಡಿಮೆ ಇತ್ತು. ಬೆಳ್ಳಂಬೆಳಗ್ಗೆ ವಾಹನಗಳೇ ಕಂಡಿಲ್ಲ. ಕಡಿಮೆ ಗೋಚರತೆ ಮತ್ತು ತೀರಾ ತಂಪು ವಾತಾವರಣ ಇರುವ ಕಾರಣ ಈ ಸಮಯದಲ್ಲಿ ವಾಹನಗಳ ಓಡಾಟ ಅಪಾಯಕಾರಿ ಎಂದು ಮೊರಾದಾಬಾದ್‌ನ ರಿಕ್ಷಾ ಚಾಲಕರೊಬ್ಬರು ತಿಳಿಸಿದ್ದಾರೆ.
'ಚಳಿ ಹಾಗೂ ಮಂಜು ಹಿನ್ನೆಲೆ ರಾತ್ರಿ ಕೆಲಸ ಮಾಡುವುದು ಬಹಳಾನೇ ಕಷ್ಟ' ಎಂದು ನೈಟ್ ಸೆಕ್ಯೂರಿಟಿ ಗಾರ್ಡ್ ಒಬ್ಬರು ತಿಳಿಸಿದ್ದಾರೆ. "ಬಹಳಾನೇ ಚಳಿ ಇದೆ ಮತ್ತು ಮಂಜಿನಿಂದಾಗಿ ನನಗೆ ಏನೂ ಕಾಣಿಸುತ್ತಿಲ್ಲ. ನಾನು ರಾತ್ರಿ ಕೆಲಸ ಮಾಡುತ್ತೇನೆ, ಆದರೆ ಪ್ರಸ್ತುತ ಈ ಚಳಿಯಿಂದ ನಿಜವಾಗಿಯೂ ಕಷ್ಟವಾಗುತ್ತಿದೆ" ಎಂದು ವಾಚ್‌ಮ್ಯಾನ್ ತಿಳಿಸಿದರು. ಈ ಪ್ರದೇಶದಲ್ಲಿನ ಮೈ ಕೊರೆಯುವ ಚಳಿ ತಡೆಯಲು ಜನರು ರಸ್ತೆಗಳ ಉದ್ದಕ್ಕೂ ಬೆಂಕಿ ಹಚ್ಚಿ ಮೈ ಬಿಸಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಮುಂಬೈಗೆ ಬಂದಿಳಿದ ಮಾನವ ಕಳ್ಳಸಾಗಣೆ ಎಂದು ಶಂಕಿಸಿ ಫ್ರಾನ್ಸ್‌ನಲ್ಲಿ ತಡೆದಿದ್ದ ವಿಮಾನ; 303 ಜನರು ಸೇಫ್
ದೆಹಲಿ ವಿಮಾನ ನಿಲ್ದಾಣದ ಫ್ಲೈಟ್ ಇನ್ಫಾರ್ಮೇಷನ್ ಡಿಸ್ಪ್ಲೇ ಸಿಸ್ಟಮ್ ಡೇಟಾ ಪ್ರಕಾರ, ಇಂದು ಮುಂಜಾನೆಯ ದಟ್ಟ ಮಂಜಿನ ಹಿನ್ನೆಲೆ ಸುಮಾರು 30 ವಿಮಾನಗಳ ಆಗಮನ ಮತ್ತು ನಿರ್ಗಮನ ಸಮಯದಲ್ಲಿ ಕೊಂಚ ಹೆಚ್ಚು ಕಡಿಮೆ ಆಗಿದೆ. ಮಂಜಿನ ವಾತಾವರಣ ಹೆಚ್ಚಿನ ಸಂಖ್ಯೆಯ ವಿಮಾನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಮೂಲಗಳು ಸೂಚಿಸಿವೆ. ಆಗಮನ, ನಿರ್ಗಮನದ ಮಾಹಿತಿಗಾಗಿ ಪ್ರಯಾಣಿಕರು ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ.
ಇದನ್ನೂ ಓದಿ: 'ಸಲಾರ್' ಸ್ಪೀಡ್ಗಿಲ್ಲ ಬ್ರೇಕ್: ಕಲೆಕ್ಷನ್ ಕಂಡು ಹುಬ್ಬೇರಿಸಿದ ಪ್ರೇಕ್ಷಕರು!
ಅಲ್ಲದೇ ದೆಹಲಿಯಲ್ಲಿ ದಟ್ಟ ಮಂಜಿನಿಂದಾಗಬಹುದಾದ ಸಂಭವನೀಯ ಆರೋಗ್ಯ ಪರಿಣಾಮಗಳ ಬಗ್ಗೆಯೂ ಐಎಂಡಿ ಎಚ್ಚರಿಸಿದೆ. ಕಣ್ಣಿನ ಸಮಸ್ಯೆ, ಊತ ವಿವಿಧ ಸೋಂಕುಗಳಿಗೆ ಕಾರಣವಾಗಬಹುದು. ಹಾಗಾಗಿ ಎಚ್ಚರಿಕೆ ಕೈಗೊಳ್ಳುವುದು ಅತ್ಯಗತ್ಯವಾಗಿದೆ.