ವಿಜಯನಗರಂ (ಆಂಧ್ರ ಪ್ರದೇಶ): ವಕೀಲರೊಬ್ಬರು ತಮ್ಮ ಪತ್ನಿಯನ್ನು ಸತತವಾಗಿ 11 ವರ್ಷಗಳ ಕಾಲ ಹೊರ ಪ್ರಪಂಚದಿಂದ ದೂರುವಿಟ್ಟು ಮನೆಯಲ್ಲೇ ಬಂಧಿ ಮಾಡಿದ್ದ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸುದೀರ್ಘ ದಿನಗಳಿಂದ ಮಗಳು ಸಂಪರ್ಕಕ್ಕೆ ಸಿಗದ ಕಾರಣ ಪೋಷಕರು ಪೊಲೀಸರ ಮೊರೆ ಹೋದ ನಂತರ, ಗೃಹ ಬಂಧನದಿಂದ ಈ ಮಹಿಳೆಗೆ ಮುಕ್ತಿ ಸಿಕ್ಕಿದೆ.
ಸಾಯಿ ಸುಪ್ರಿಯಾ ಎಂಬ ಮಹಿಳೆಯೇ ಗಂಡನ ಮನೆಯ ಬಂಧನದಿಂದ ಹೊರ ಬಂದವರಾಗಿದ್ದು, ಗೋದಾವರಿ ಮಧುಸೂದನ್ ಎಂಬುವವರೇ ಪತ್ನಿಯನ್ನು ಕೂಡಿ ಹಾಕಿದ ವಕೀಲ ಎಂದು ತಿಳಿದು ಬಂದಿದೆ. ತಾಯಿ ಗೋದಾವರಿ ಉಮಾಮಹೇಶ್ವರಿ ಮತ್ತು ಸಹೋದರ ತಪ್ಪುದಾರಿಗೆಳೆಯುವ ಮಾತು ಕೇಳಿ ಮಧುಸೂಧನ್ ತಮ್ಮ ಪತ್ನಿಯನ್ನು 11 ವರ್ಷಗಳ ಕಾಲ ಕತ್ತಲೆಯ ಕೋಣೆಯಲ್ಲಿ ಬಂಧಿಸಿದ್ದರು ಎಂದು ನೊಂದ ಸಾಯಿ ಸುಪ್ರಿಯಾರ ಪೋಷಕರು ಹೇಳಿದ್ದಾರೆ.
ಏನಿದು ಪ್ರಕರಣ?: ಶ್ರೀಸತ್ಯಸಾಯಿ ಪುಟ್ಟಪರ್ತಿ ಜಿಲ್ಲೆಗೆ ಸೇರಿದ ಸಾಯಿ ಸುಪ್ರಿಯಾ ಅವರನ್ನು 2008ರಲ್ಲಿ ವಿಜಯನಗರಂ ಜಿಲ್ಲೆಯ ಮಧುಸೂದನ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಇಲ್ಲಿನ ಕಂಟೋನ್ಮೆಂಟ್ ಬಾಲಾಜಿ ಮಾರುಕಟ್ಟೆ ಬಳಿ ಮಧುಸೂದನ್ ಕುಟುಂಬ ವಾಸವಾಗಿದೆ. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಮಧುಸೂದನ್ ವೃತ್ತಿಯಲ್ಲಿ ವಕೀಲರಾಗಿದ್ದು, ತಾಯಿ ಹಾಗೂ ಸಹೋದರ ಮಾತು ಕೇಳಿ ಸಾಯಿ ಸುಪ್ರಿಯಾರನ್ನು ಹೊರ ಪ್ರಪಂಚದಿಂದ ದೂರು ಇಟ್ಟಿದ್ದರು. ಮನೆಯಲ್ಲೇ ಕೂಡಿ ಹಾಕಿ ತವರು ಮನೆಯವರ ಸಂಪರ್ಕಕ್ಕೂ ಬಾರದಂತೆ ಬಂಧಿಸಲಾಗಿತ್ತು.
ಸಂತ್ರಸ್ತೆಯ ಕುಟುಂಬಸ್ಥರು ಹಲವು ಬಾರಿ ತಮ್ಮ ಮಗಳು ಸಾಯಿ ಸುಪ್ರಿಯಾರ ಬಗ್ಗೆ ಕೇಳಿದಾಗ ತಮ್ಮ ವಕೀಲ ವೃತ್ತಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಮಧುಸೂದನ್ ಆರೋಪಿಸಿದ್ದರು. ಇದೇ ವಿಷಯದ ಮೇಲೆ ಸಂತ್ರಸ್ತ ಕುಟುಂಬ ಸದಸ್ಯರನ್ನು ಹೆದರಿಸುತ್ತಿದ್ದರು. ಪೋಷಕರು 11 ವರ್ಷಗಳಿಂದ ತಮ್ಮ ಮಗಳ ಬಗ್ಗೆ ಚಿಂತನೆಗೆ ಒಳಗಾಗಿದ್ದರು. ಕೊನೆಗೆ ತಾಳ್ಮೆ ಕಳೆದುಕೊಂಡ ಸಂತ್ರಸ್ತೆಯ ಪೋಷಕರು, ತಮ್ಮ ಮಗಳನ್ನು ಕೂಡಿ ಹಾಕಿರುವ ಕುರಿತಾಗಿ ಮಧುಸೂದನ್ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಪೊಲೀಸರಿಗೂ ಅಡ್ಡಿ: ಸಾಯಿ ಸುಪ್ರಿಯಾ ಪೋಷಕರು ಎಸ್ಪಿಗೆ ದೂರು ನೀಡಿದ ಬೆನ್ನಲ್ಲೇ ಪೊಲೀಸರು ಫೆ.28ರಂದು ಮಧುಸೂದನ್ ಮನೆಗೆ ತೆರಳಿದ್ದಾರೆ. ಆದರೆ, ಆಗಲೂ ಕೂಡ ವಕೀಲ ಮಧುಸೂದನ್ ಪೊಲೀಸರಿಗೆ ಅಡ್ಡಿ ಪಡಿಸಿ, ಬೆದರಿಕೆ ಹಾಕಲು ಯತ್ನಿಸಿದ್ದಾರೆ. ಯಾವುದೇ ಸರ್ಚ್ ವಾರಂಟ್ ಇಲ್ಲದೆ ನಮ್ಮ ಮನೆಯನ್ನು ಹುಡುಕಲು ನಿಮಗೆ ಅಧಿಕಾರವಿಲ್ಲ ಎಂದು ಪೊಲೀಸರನ್ನು ತಡೆದಿದ್ದಾರೆ.
ಆದ್ದರಿಂದ ಮರು ದಿನವೇ ಪೊಲೀಸರು ಹಾಗೂ ನೊಂದ ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನಂತರ, ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಪೊಲೀಸರು, ವಕೀಲ ಮಧುಸೂದನ್ ಮನೆಗೆ ಪ್ರವೇಶಿಸಿದ್ದಾರೆ. ಈ ವೇಳೆ ಅಸ್ವಸ್ಥ ಸ್ಥಿತಿಯಲ್ಲಿ ಸಾಯಿ ಪ್ರಿಯಾ ಪತ್ತೆಯಾಗಿದ್ದಾರೆ. ಕತ್ತಲೆಯ ಕೋಣೆಯ ಒಂದು ಮೂಲೆಯಲ್ಲಿ ಜೀವನ ನಡೆಸುತ್ತಿದ್ದರು. ಕೂಡಲೇ ಆಕೆಯನ್ನು ಹೊರಗೆ ಕರೆತರಲಾಯಿತು. ನಂತರ ಸಾಯಿ ಸುಪ್ರಿಯಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯದ ಆದೇಶದಂತೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯನಗರಂ ಟೌನ್ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ನೊಂದ ಸಾಯಿ ಸುಪ್ರಿಯಾ ಮಾತನಾಡಿ, "ನನ್ನನ್ನು ಪೊಲೀಸರು ರಕ್ಷಣೆ ಮಾಡಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು. ಆಗ ನ್ಯಾಯಾಧೀಶರ ಬಳಿ ಮಾತನಾಡಿದೆ. ನಾನು ನನ್ನ ಮಕ್ಕಳನ್ನು ಕರೆದುಕೊಂಡು ನನ್ನ ಮನೆಗೆ ಹೋಗಲು ಬಯಸುತ್ತೇನೆ. ನಾನು ಅಲ್ಲಿ ಕೆಲವು ವರ್ಷಗಳನ್ನು ಸಂತೋಷದಿಂದ ಕಳೆಯಲು ಇಚ್ಛಿಸಿದ್ದೇನೆ. ನಾನು ಮನೆಯಿಂದ ಹೊರಬರಲು ನಾನು ಅಂತಿಮವಾಗಿ ಯಶಸ್ವಿಯಾಗಿದ್ದೇನೆ'' ಎಂದು ಹೇಳಿದರು.
ಮಾಧ್ಯಮದ ಮುಂದೆ ಮತ್ತೊಬ್ಬ ಸಂತ್ರಸ್ತೆ: ವಕೀಲ ಮಧುಸೂದನ್ ಪತ್ನಿ ಸಾಯಿ ಸುಪ್ರಿಯಾ ಗೃಹ ಬಂಧನದಿಂದ ಬಿಡುಗಡೆಯಾದ 24 ಗಂಟೆಗಳಲ್ಲಿ ಅದೇ ಕುಟುಂಬದ ಮತ್ತೊಬ್ಬ ಸಂತ್ರಸ್ತೆ ಮಾಧ್ಯಮದ ಮುಂದೆ ಬಂದಿದ್ದಾರೆ. ಈಕೆಯನ್ನು ಮಧುಸೂದನ್ ಸಹೋದರ ದುರ್ಗಾಪ್ರಸಾದ್ ಪತ್ನಿ ಪುಷ್ಪಲತಾ ಎಂದು ಗುರುತಿಸಲಾಗಿದೆ. ಪ್ರಸ್ತುತ ವಿಶಾಖಪಟ್ಟಣಂನಲ್ಲಿ ವೈದ್ಯೆಯಾಗಿ ಪುಷ್ಪಲತಾ ಅಭ್ಯಾಸ ಮಾಡುತ್ತಿದ್ದಾರೆ.
ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಹಿರಿಯ ಮಗನನ್ನು ಆರು ವರ್ಷಗಳಿಂದ ನನ್ನಿಂದ ದೂರ ಮಾಡಲಾಗಿದ್ದು, ಅವನ ಮುಖ ನೋಡಲು ನನಗೆ ಬಿಡುತ್ತಿಲ್ಲ. ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಿದರೂ ಯಾವುದೇ ನ್ಯಾಯ ದೊರಕಿಲ್ಲ. ಈಗ ಮಾಧ್ಯಮಗಳ ಮೂಲಕ ಸಾಯಿ ಸುಪ್ರಿಯಾ ಬಿಡುಗಡೆಯ ಬಗ್ಗೆ ತಿಳಿದುಕೊಂಡಿದ್ದೇನೆ. ಇದರಂತೆ ನನಗೂ ನ್ಯಾಯ ಒದಗಿಸುವಂತೆ ಪುಷ್ಪಲತಾ ಹೇಳಿಕೊಂಡಿದ್ದಾರೆ. ಅಲ್ಲದೇ, ಪುಷ್ಪಲತಾ ಹಾಗೂ ಆಕೆಯ ತಂದೆ ಅಪ್ಪಾಲನಾಯ್ಡು ಪೊಲೀಸರನ್ನೂ ಭೇಟಿ ಮಾಡಿ ನೆರವಿಗಾಗಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೊರೊನಾಗೆ ಹೆದರಿ 3 ವರ್ಷದಿಂದ ಮನೆಯಲ್ಲೇ ಲಾಕ್ ಆಗಿದ್ದ ತಾಯಿ, ಮಗು ರಕ್ಷಣೆ