ಇಟಾ (ಉತ್ತರ ಪ್ರದೇಶ): ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾದ 92 ವರ್ಷದ ಕೈದಿಯನ್ನು ಸರಪಳಿಯಿಂದ ಕಟ್ಟಿಹಾಕಿ ಚಿಕಿತ್ಸೆ ನೀಡಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದೆ.
ಬಾಬುರಾಮ್ ಎಂಬ ಹಲವಾರು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಹಾಗಾಗಿ ಅವರನ್ನು ಜಿಲ್ಲಾ ಮಹಿಳಾ ಆಸ್ಪತ್ರೆಯ ಕೋವಿಡ್ ವಾರ್ಡ್ಗೆ ದಾಖಲಿಸಲಾಗಿತ್ತು. ಆಕ್ಸಿಜನ್ ಮಾಸ್ಕ್ ಧರಿಸಿ ಬೆಡ್ ಮೇಲೆ ಕುಳಿತಿದ್ದ ಇವರ ಕಾಲುಗಳನ್ನು ಸರಪಳಿಯಿಂದ ಕಟ್ಟಿಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗಿತ್ತು.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆ: ವಿಚಾರಣಾಧೀನ ಕೈದಿ ಪತಿಯೂ ನೇಣಿಗೆ ಶರಣು
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇಟಾ ಜೈಲಧಿಕಾರಿಗಳು ಕಾರಾಗೃಹದ ವಾರ್ಡನ್‌ನನ್ನು ಅಮಾನತುಗೊಳಿಸಿದ್ದು, ಸರಪಳಿ ತೆಗೆಯುವಂತೆ ಆಸ್ಪತ್ರೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಘಟನೆಗೆ ಕಾರಣವಾದ ಅಧಿಕಾರಿಗಳಿಂದ ವಿವರಣೆ ನೀಡುವಂತೆಯೂ ಸೂಚಿಸಿದ್ದಾರೆ.