ತಿರುವನಂತಪುರ : ಕೇರಳದಲ್ಲಿ 82.6 ಪ್ರತಿಶತ ಜನರು ಕೋವಿಡ್ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂದು ಕೋವಿಡ್-19 ಝೀರೋ ಸಮೀಕ್ಷೆಯು ಕಂಡು ಹಿಡಿದಿದೆ.
ಕೇರಳ ಸರ್ಕಾರ ಇಂದು ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದೆ. 42.2 ಶೇಕಡಾ ಮಕ್ಕಳು ಮತ್ತು 65.4 ಶೇಕಡಾ ಗರ್ಭಿಣಿಯರು 49 ವರ್ಷ ವಯಸ್ಸಿನವರು ಸೋಂಕಿನ ವಿರುದ್ಧದ ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂದು ಈ ವರದಿ ಹೇಳುತ್ತದೆ.
ಝೀರೋ ಸಮೀಕ್ಷೆಯು ಆರು ವಿಭಾಗಗಳಲ್ಲಿ 13,336 ಮಾದರಿಗಳನ್ನು ಪರೀಕ್ಷಿಸಿದೆ. ಸಮೀಕ್ಷೆಯು 18 ವರ್ಷಕ್ಕಿಂತ ಮೇಲ್ಪಟ್ಟ 82.6 ಪ್ರತಿಶತದಷ್ಟು ಜನರಲ್ಲಿ ಆ್ಯಂಟಿಬಾಡಿಸ್ ಇರುವಿಕೆಯನ್ನು ಕಂಡುಕೊಂಡಿದೆ.
ಬುಡಕಟ್ಟು ಪ್ರದೇಶಗಳಲ್ಲಿ 18ಕ್ಕಿಂತ ಹೆಚ್ಚು ವಯಸ್ಸಿನ 78.2 ಪ್ರತಿಶತ ಜನರು ಪ್ರತಿಕಾಯಗಳನ್ನು ಹೊಂದಿದ್ದಾರೆ. ಕರಾವಳಿ ಪ್ರದೇಶಗಳಲ್ಲಿ ಶೇ.87.7 ಮತ್ತು ಕೊಳೆಗೇರಿ ಪ್ರದೇಶಗಳಲ್ಲಿ ಶೇ.85.3ರಷ್ಟು ಜನರು ಪ್ರತಿಕಾಯಗಳನ್ನು ಹೊಂದಿರುವುದು ಕಂಡು ಬಂದಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಸೋಮವಾರ ವಿಧಾನಸಭೆಯಲ್ಲಿ ಸಮೀಕ್ಷಾ ವರದಿಯನ್ನು ಮಂಡಿಸಿದ್ದಾರೆ.
ಸಮೀಕ್ಷೆಯನ್ನು ಆರು ವಿಭಾಗಗಳಲ್ಲಿ ನಡೆಸಲಾಗಿದೆ : 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು, ವೈರಸ್ ಸೋಂಕಿತ ಮಕ್ಕಳು, 18 ರಿಂದ 49 ವರ್ಷದೊಳಗಿನ ಗರ್ಭಿಣಿಯರಲ್ಲಿ ಸೋಂಕು, ಬುಡಕಟ್ಟು, ಕರಾವಳಿ ಮತ್ತು ಕೊಳೆಗೇರಿ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣವನ್ನು ಕಂಡು ಹಿಡಿಯುವುದು ಸಮೀಕ್ಷೆಯ ಗುರಿಯಾಗಿದೆ.
18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಂದ ಸಂಗ್ರಹಿಸಿದ 4429 ಮಾದರಿಗಳಲ್ಲಿ 3650 ಮಾದರಿಗಳು ಕೋವಿಡ್ ವಿರುದ್ಧದ ಪ್ರತಿಕಾಯಗಳನ್ನು ಹೊಂದಿರುವುದು ಕಂಡು ಬಂದಿದೆ. ಗರ್ಭಿಣಿಯರಿಂದ ಸಂಗ್ರಹಿಸಿದ 2274 ಮಾದರಿಗಳಲ್ಲಿ 1487 ಪ್ರತಿಕಾಯ ಪಾಸಿಟಿಬ್ ಬಂದಿದೆ. ಮಕ್ಕಳಿಂದ ಸಂಗ್ರಹಿಸಿದ 1459 ಮಾದರಿಗಳಲ್ಲಿ 588 ಮಾದರಿಗಳು ಪ್ರತಿಕಾಯ(anti-bodies)ಗಳನ್ನು ಹೊಂದಿರುವುದು ಕಂಡು ಬಂದಿದೆ.
ಬುಡಕಟ್ಟು ಪ್ರದೇಶಗಳಲ್ಲಿ 1521ರಲ್ಲಿ 1189 ಮಾದರಿಗಳು ಪ್ರತಿಕಾಯ ಹೊಂದಿರುವುದು ಗೊತ್ತಾಗಿದೆ. ಮತ್ತು ಕರಾವಳಿ ಪ್ರದೇಶಗಳಿಂದ ಸಂಗ್ರಹಿಸಿದ 1476 ಮಾದರಿಗಳಲ್ಲಿ 1294 ಮಾದರಿಗಳು ಕೋವಿಡ್ ಪ್ರತಿಕಾಯಗಳನ್ನು ಹೊಂದಿವೆ.
ವ್ಯಾಕ್ಸಿನೇಷನ್ ಸಹಾಯ ಮಾಡಿದೆ : ವ್ಯಾಪಕವಾದ ವ್ಯಾಕ್ಸಿನೇಷನ್ 18ವರ್ಷಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯಲ್ಲಿ ಪ್ರತಿಕಾಯಗಳನ್ನು ಕಂಡು ಹಿಡಿಯಲು ಸಹಾಯ ಮಾಡಿದೆ ಎಂದು ಸಮೀಕ್ಷೆಯು ತಿಳಿಸಿದೆ.
ಕೋವಿಡ್ ಸೋಂಕಿನ ನಂತರ ಅಥವಾ ವ್ಯಾಕ್ಸಿನೇಷನ್ ಮೂಲಕ ವ್ಯಕ್ತಿಯಲ್ಲಿ ಆ್ಯಂಟಿ ಸ್ಪೈಕ್ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ. ಆಂಟಿ ನ್ಯೂಕ್ಲಿಯೊಸ್ಕೋಪಿಕ್ ಪ್ರತಿಕಾಯಗಳು ನೈಸರ್ಗಿಕ ಸೋಂಕಿನ ಮೂಲಕ ಅಥವಾ ಕೋವಿಶೀಲ್ಡ್ ಹೊರತುಪಡಿಸಿ ಕೋವಿಡ್ ವಿರೋಧಿ ವ್ಯಾಕ್ಸಿನೇಷನ್ ಮೂಲಕ ಉತ್ಪತ್ತಿಯಾಗುತ್ತವೆ.
ಶಾಲೆ ಪುನಃ ತೆರೆಯುವುದನ್ನ ಗಮನದಲ್ಲಿರಿಸಿ ಸಮೀಕ್ಷೆ : ಶಾಲೆಯನ್ನು ಪುನಃ ತೆರೆಯುವುದನ್ನು ಗಮನದಲ್ಲಿಟ್ಟುಕೊಂಡು ಝೀರೋ ಕಣ್ಗಾವಲು ಸಮೀಕ್ಷೆಯನ್ನು ನಡೆಸಲು ಸರ್ಕಾರ ನಿರ್ಧರಿಸಿತು.
ಈ ಹಿಂದೆ ಕೇರಳದಲ್ಲಿ ಐಸಿಎಂಆರ್ ನಡೆಸಿದ ಝೀರೋ ಕಣ್ಗಾವಲು ಸಮೀಕ್ಷೆಯು ಕೇರಳದಲ್ಲಿ ಶೇ.50ಕ್ಕಿಂತ ಹೆಚ್ಚು ಜನಸಂಖ್ಯೆಗೆ ಪ್ರತಿಕಾಯಗಳಿಲ್ಲ ಎಂದು ತಿಳಿದು ಬಂದಿದೆ ಮತ್ತು ಇದು ಕೇರಳದಲ್ಲಿ ಸೋಂಕಿನ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಉಲ್ಲೇಖಿಸಿದೆ.