ಚಿತ್ತೂರು: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ-ತಿರುಪತಿ ಹೆದ್ದಾರಿಯ ಬಳಿಯ ಬಕರಾಪೇಟ ಕಣುಮಾ ಎಂಬಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಮದುವೆ ನಿಶ್ಚಿತಾರ್ಥಕ್ಕೆ ಜನರನ್ನು ಹೊತ್ತು ಸಾಗುತ್ತಿದ್ದ ಬಸ್ ಪಲ್ಟಿಯಾಗಿದೆ. ಪರಿಣಾಮ, ಒಂದು ಮಗು ಸೇರಿದಂತೆ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 45 ಜನ ಗಾಯಗೊಂಡಿದ್ದಾರೆ.
ಖಾಸಗಿ ಬಸ್ಸಿನಲ್ಲಿ ಸುಮಾರು 63 ಪ್ರಯಾಣಿಕರಿದ್ದರು. ಚಾಲಕನ ಅತಿ ವೇಗದ ಚಾಲನೆಯೇ ದುರಂತಕ್ಕೆ ಕಾರಣವಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಪೊಲೀಸರು ಮಾಹಿತಿ ತಿಳಿಸಿದ್ದಾರೆ.
ಈಗಾಗಲೇ ಸ್ಥಳಕ್ಕೆ ರಕ್ಷಣಾ ತಂಡಗಳು ದೌಡಾಯಿಸಿವೆ. ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಮೃತರನ್ನು ಮಾಲಿಶೆಟ್ಟಿ ವೆಂಗಪ್ಪ (60), ಮಾಲಿಶೆಟ್ಟಿ ಮುರಳಿ (45), ಕಾಂತಮ್ಮ (40), ಮಾಲಿಶೆಟ್ಟಿ ಗಣೇಶ್ (40), ಜೆ.ಯಶಸ್ವಿನಿ (8), ಚಾಲಕ ನಬಿ ರಸೂಲ್ ಮತ್ತು ಕ್ಲೀನರ್ ಎಂದು ಗುರುತಿಸಲಾಗಿದೆ.
ನಾರಾವರಿಪಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು, ಗಾಯಾಳುಗಳನ್ನು ತಿರುಪತಿ ರುವಾ ಮತ್ತು ಸ್ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ನವ ವಧುವಿನ ಕುಟುಂಬ ಬಲಿ: ಅನಂತಪುರ ಜಿಲ್ಲೆಯ ಧರ್ಮಾವರಂನ ರಾಜೇಂದ್ರ ನಗರದ ವೇಣು ಅವರ ನಿಶ್ಚಿತಾರ್ಥ ಚಿತ್ತೂರು ಜಿಲ್ಲೆಯ ನಾರಾಯಣವನಂ ಮೂಲದ ಯುವತಿ ಜೊತೆ ನಿಶ್ಚಯವಾಗಿತ್ತು. ಭಾನುವಾರ ಬೆಳಗ್ಗೆ ತಿರುಚಾನೂರಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವೇಣು(ವರ) ಕುಟುಂಬವು ಇತರೆ 63 ಮಂದಿಯೊಂದಿಗೆ ಖಾಸಗಿ ಬಸ್‌ನಲ್ಲಿ ಮಧ್ಯಾಹ್ನ 3.30 ಕ್ಕೆ ಧರ್ಮಾವರಂನಿಂದ ಹೊರಟಿದ. ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದರಿಂದ ತಿರುವಿನಲ್ಲಿ ಬಸ್ ನಿಯಂತ್ರಣ ತಪ್ಪಿ, ಸುಮಾರು 100 ಅಡಿಯ ಕಣಿವೆಗೆ ಉರುಳಿದೆ.
ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಕೆಲವರ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಗಾಯಗೊಂಡವರಲ್ಲಿ 10ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ.
ಶಾಸಕ ಚೇವಿರೆಡ್ಡಿ ಭಾಸ್ಕರ್ ರೆಡ್ಡಿ ತಿರುಪತಿ ರುವಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ರಾತ್ರಿ 10:30ರವರೆಗೂ ಘಟನೆ ಬೆಳಕಿಗೆ ಬಂದಿರಲಿಲ್ಲ. ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಗಾಯಾಳುಗಳ ಕಿರುಚಾಟ ಕೇಳಿ ಕಣಿವೆಯತ್ತ ನೋಡಿದಾಗ ಬಸ್ ಬಿದ್ದಿರುವುದು ತಿಳಿದುಬಂದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದ ತಕ್ಷಣ ಜಿಲ್ಲಾಧಿಕಾರಿ ಎಂ.ಹರಿನಾರಾಯಣನ್ ಮತ್ತು ತಿರುಪತಿ ನಗರ ಎಸ್ಪಿ ವೆಂಕಟ ಅಪ್ಪಲನಾಯ್ಡು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಪ್ರಾರಂಭಿಸಿದ್ದರು.
ಇದನ್ನೂ ಓದಿ: ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ: ಭೀತಿಯಿಂದ ಹೊರಗೆ ಓಡಿ ಬಂದ ಜನ