ಹೈದರಾಬಾದ್ (ತೆಲಂಗಾಣ) : ದೇಶಾದ್ಯಂತ 77 ನೇ ಸ್ವಾತಂತ್ರ್ಯೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗಿದೆ. ಇಲ್ಲಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಂಗಳವಾರ 77 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಮೋಜಿ ಫಿಲ್ಮ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕಿ ವಿಜಯೇಶ್ವರಿ ಚೆರುಕುರಿ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರ ಗೀತೆ ಮೊಳಗಿತು. ನಂತರ ಎಂಡಿ ವಿಜಯೇಶ್ವರಿ ಅವರು ರಾಮೋಜಿ ಫಿಲಂ ಸಿಟಿಯ ಸಿಬ್ಬಂದಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಯುಕೆಎಂಎಲ್ ನಿರ್ದೇಶಕ ಶಿವರಾಮಕೃಷ್ಣ ಮತ್ತು ರಾಮೋಜಿ ಸಮೂಹ ಸಂಸ್ಥೆಗಳ ಮಾನವ ಸಂಪನ್ಮೂಲ ವಿಭಾಗದ ಅಧ್ಯಕ್ಷ ಅಟ್ಲೂರಿ ಗೋಪಾಲರಾವ್ ಅವರು ಉಪಸ್ಥಿತರಿದ್ದರು. ಜೊತೆಗೆ ರಾಮೋಜಿ ಗ್ರೂಪ್‌ನ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಳೆದ ದಿನ ಸ್ವಾತಂತ್ರ್ಯೋತ್ಸವ ಹಿನ್ನೆಲೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಭರ್ಜರಿ ಸಿದ್ಧತೆ ನಡೆಸಲಾಗಿತ್ತು. ಈ ಸಂಬಂಧ ಫಿಲ್ಮ್ ಸಿಟಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ರಾಮೋಜಿ ಫಿಲ್ಮ್ ಸಿಟಿಯು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ ವಿಶ್ವದ ಅತಿದೊಡ್ಡ ಫಿಲ್ಮ್ ಸಿಟಿ ಎಂದು ಗುರುತಿಸಲ್ಪಟ್ಟಿದೆ. ಫಿಲ್ಮ್ ಸಿಟಿಯು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ವಿನೂತನ ಅನುಭವವನ್ನು ನೀಡುತ್ತಿದೆ. ಇವೆಲ್ಲದರ ನಡುವೆ ಫಿಲ್ಮ್ ಸಿಟಿಯು ದೇಶಭಕ್ತಿ ಮತ್ತು ರಾಷ್ಟ್ರ- ನಿರ್ಮಾಣದ ಪ್ರಜ್ಞೆಯನ್ನು ಹೊಂದಿದೆ. ರಾಮೋಜಿ ಫಿಲ್ಮ್ ಸಿಟಿಯ ಪ್ರಮುಖ ಕಟ್ಟಡಗಳ ಮೇಲೆ ಯಾವಾಗಲೂ ತ್ರಿವರ್ಣ ಧ್ವಜ ರಾರಾಜಿಸುತ್ತದೆ.
ಇದನ್ನೂ ಓದಿ : ರಾಮೋಜಿ ಫಿಲ್ಮ್ ಸಿಟಿ ಮುಡಿಗೆ ಮತ್ತೊಂದು ಮುಕುಟ... ಅತ್ಯುತ್ತಮ ಆತಿಥ್ಯ ಪ್ರಶಸ್ತಿಯ ಗರಿ