ಅಹಮದಾಬಾದ್(ಗುಜರಾತ್): 1930ರ ದಶಕದ ಆರಂಭದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಹೊಸ ರೂಪ ನೀಡಲು ಪ್ರಾರಂಭವಾಗಿದ್ದ ನವಜೀವನ್ ಟ್ರಸ್ಟ್ ಇಂದಿಗೂ ವಿಶ್ವಾದ್ಯಂತ ಲಕ್ಷಾಂತರ ಜನರ ಮೇಲೆ ತನ್ನ ಪ್ರಭಾವ ಬೀರಿದೆ. ಮಹಾತ್ಮ ಗಾಂಧೀಜಿ 1919ರ ಸೆಪ್ಟೆಂಬರ್ 7ರಂದು ನವಜೀವನ್ ವಾರಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡ ಬಳಿಕ ಗುಜರಾತ್‌ನಲ್ಲಿ ಈ ಟ್ರಸ್ಟ್ ಆರಂಭಿಸಲಾಗಿತ್ತು. ಅಹಿಂಸೆ, ಸ್ವಾತಂತ್ರ್ಯ ಮತ್ತು ಕೋಮು ಸೌಹಾರ್ದದ ಅವರ ಆದರ್ಶಗಳನ್ನು ಓದುಗರಲ್ಲಿ ಪ್ರಚುರಪಡಿಸುವುದು ಇದರ ಮುಖ್ಯ ಗುರಿಯಾಗಿತ್ತು.
ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಗಾಂಧಿ ತತ್ವಗಳ ಬಗ್ಗೆ ಅಧ್ಯಯನ ಮಾಡಲು ಆಸಕ್ತಿ ಹೊಂದಿರುವವರಿಗೆ ಗಾಂಧಿಯವರ ಸಾಹಿತ್ಯ ಮತ್ತು ಆದರ್ಶಗಳು ಜ್ಞಾನದ ಮನೆಯಾಗಿ ನವಜೀವನ್ ಉಳಿದಿದೆ. ಈ ಟ್ರಸ್ಟ್ ಅನೇಕ ಯಂತ್ರಗಳನ್ನು ಸಂರಕ್ಷಿಸಿದ್ದು, ಇಂಗ್ಲಿಷ್ ಜೊತೆಗೆ ಭಾರತದ 18 ಭಾಷೆಗಳಲ್ಲಿ 1,000ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ.
ಬ್ರಿಟೀಷರ ಗುಲಾಮಗಿರಿಯಿಂದ ದೇಶವನ್ನು ಮುಕ್ತಗೊಳಿಸಲು ಗಾಂಧೀಜಿ ನಡೆಸುತ್ತಿದ್ದ ನವಜೀವನ್ ಮತ್ತು ಯಂಗ್ ಇಂಡಿಯಾ ವಾರಪತ್ರಿಕೆಗಳು ಇದೇ ಯಂತ್ರಗಳಲ್ಲಿ ಮುದ್ರಿಸಲಾಗಿದೆ. ದೆಹಲಿಯ 'ಕಾಮ್ರೇಡ್' ಪತ್ರಿಕೆಯ ಮಾಲೀಕ ಮೌಲಾನಾ ಮೊಹಮ್ಮದ್ ಅಲಿ ಅವರು ತಮ್ಮ ಸ್ವಂತ ಪತ್ರಿಕೆ ಮುಚ್ಚಿದಾಗ 'ನವಜೀವನ್'ಗೆ ಎಲ್ಲಾ ಮುದ್ರಣಾಲಯಗಳನ್ನು ಕೊಡುಗೆಯಾಗಿ ನೀಡಿದರು.
ನವಜೀವನ್ ನಿಯತಕಾಲಿಕೆಯನ್ನು ಆರಂಭದಲ್ಲಿ ತಿಂಗಳಿಗೊಮ್ಮೆ ಪ್ರಕಟಿಸಲಾಗುತ್ತಿತ್ತು. ಆದರೆ ಗಾಂಧೀಜಿಯವರು ಸಂಪಾದಕರಾದ ನಂತರ ವಾರಕ್ಕೊಮ್ಮೆ ಪ್ರಕಟಿಸುತ್ತಿದ್ದಂತೆ ಓದುಗರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಆಗ ಸಾರ್ಖಿಗರ ವಾಡಿಯಲ್ಲಿ 400 ರೂ. ಬಾಡಿಗೆ ಮನೆ ಪಡೆದು 1922ರ ಫೆ.11ರಂದು ನವಜೀವನ ಮುದ್ರಾಣಾಲಯ ಆರಂಭಿಸಲಾಯಿತು. ಆದರೆ ನವಜೀವನ್ ಟ್ರಸ್ಟ್ ನೋಂದಣಿಯಾಗಿದ್ದು ಮಾತ್ರ 1929ರ ನವೆಂಬರ್ 27 ರಂದು. ಸರ್ದಾರ್ ವಲ್ಲಭಭಾಯಿ ಪಟೇಲ್ ಟ್ರಸ್ಟ್‌ನ ಮೊದಲ ಅಧ್ಯಕ್ಷರಾಗಿದ್ದರು.
ನವಜೀವನ್ ಟ್ರಸ್ಟ್‌ನ ಉದ್ದೇಶವು ಶಾಂತಿಯುತ ಸ್ವಾತಂತ್ರ್ಯ ಪಡೆಯುವ ಬಗ್ಗೆ ಜನರಿಗೆ ಅರಿವು ನೀಡುವುದಾಗಿತ್ತು. ಈ ಟ್ರಸ್ಟ್ ಚರಕ ಮತ್ತು ಖಾದಿ, ಮಹಿಳಾ ಸಬಲೀಕರಣ, ವಿಧವಾ ವಿವಾಹಗಳು, ಮಹಿಳೆಯರ ಶಿಕ್ಷಣ, ಹಿಂದೂ ಮತ್ತು ಮುಸ್ಲಿಮರಲ್ಲಿ ಏಕತೆ, ಅಸ್ಪೃಶ್ಯತೆ ಮತ್ತು ಬಾಲ್ಯವಿವಾಹವನ್ನು ವಿರೋಧಿಸುವುದರ ಜೊತೆಗೆ, ಹೈನುಗಾರಿಕೆ ಮೂಲಕ ಜಾನುವಾರುಗಳನ್ನು ಉಳಿಸುವುದು ಹಾಗೂ ಇತರ ಸಂಸ್ಥೆಗಳನ್ನು ಪ್ರಾರಂಭಿಸುವ ಸೃಜನಶೀಲ ಮಾರ್ಗಗಳನ್ನು ಪರಿಚಯಿಸುವತ್ತ ಗಮನಹರಿಸಿದೆ.
ನವಜೀವನ್ ಟ್ರಸ್ಟ್ ಇಂಗ್ಲಿಷ್ ಭಾಷೆಗೆ ನೀಡಲಾದ ಅನಗತ್ಯ ಪ್ರಾಮುಖ್ಯತೆಯನ್ನು ಮುರಿಯಲು ಹಾಗೂ ಇದರ ಬದಲಿಗೆ ಹಿಂದಿ ಅಥವಾ ಹಿಂದೂಸ್ತಾನದ ಸ್ಥಾಪನೆಯನ್ನು ಪ್ರಚಾರ ಮಾಡಲು ಕೆಲಸ ಮಾಡಿದೆ. ಸಾಮಾನ್ಯ ಮತ್ತು ಇತರ ಪುಸ್ತಕಗಳ ಪ್ರಕಟಣೆಗಳ ಮೂಲಕ ಜನರ ಧಾರ್ಮಿಕ, ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಉನ್ನತಿಯನ್ನು ಉತ್ತೇಜಿಸುವ ಗುರಿಯನ್ನು ಟ್ರಸ್ಟ್ ಹೊಂದಿತ್ತು. ಟ್ರಸ್ಟ್ ಇದುವರೆಗೆ ಯಾವುದೇ ಅನುದಾನ ಅಥವಾ ದೇಣಿಗೆ ಸ್ವೀಕರಿಸಿಲ್ಲ ಅನ್ನೋದು ವಿಶೇಷ.