ನವದೆಹಲಿ: ಕೋವಿಡ್ ಎರಡನೇ ಅಲೆ ವೇಳೆ ಸುಮಾರು 724 ಮಂದಿ ವೈದ್ಯರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ತಿಳಿಸಿದೆ. ಇದೇ ವೇಳೆ ವೈದ್ಯರ ಮೇಲೆ ದೇಶದ ಹಲವೆಡೆ ಹಲ್ಲೆಗಳಾಗುತ್ತಿರುವುದನ್ನು ಖಂಡಿಸಿ ಜೂನ್ 18ರಂದು ಪ್ರತಿಭಟನೆ ನಡೆಸುವುದಾಗಿ ಹೇಳಿದೆ.
ಈ ಕುರಿತು ಮಾತನಾಡಿರುವ ಐಎಂಎ ಅಧ್ಯಕ್ಷ ಡಾ. ಜೆ.ಎ.ಜಯಲಾಲ್, ಕಳೆದ ಎರಡು ವಾರಗಳಲ್ಲಿ ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ, ದೆಹಲಿ, ಉತ್ತರ ಪ್ರದೇಶ, ಕರ್ನಾಟಕ ಸೇರಿ ಹಲವು ಭಾಗಗಳಲ್ಲಿ ವೈದ್ಯರ ಮೇಲೆ ಹಲ್ಲೆಗಳಾಗುತ್ತಿರುವುದು ತುಂಬಾ ಬೇಸರದ ಸಂಗತಿಯಾಗಿದೆ. ಈ ವೇಳೆ ವೈದ್ಯರು ಗಂಭೀರ ಗಾಯಗಳಿಗೆ ಒಳಗಾಗಿದ್ದಾರೆ ಎಂದಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ದಿನಕ್ಕೆ ಒಂದು ಬಾರಿಯಾದರೂ ವೈದ್ಯರ ಮೇಲೆ ಹಲ್ಲೆಯಾಗುತ್ತಿದೆ ಎಂದು ಆರೋಪಿಸಿದ ಜಯಲಾಲ್, ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಪ್ರಧಾನಮಂತ್ರಿ, ಕೇಂದ್ರ ಮಂತ್ರಿ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ನಿಲುವುಗಳು 'ಪಾಕಿಸ್ತಾನ ಪರ' ಇವೆ: ಜಿತಿನ್ ಪ್ರಸಾದ್ ಟೀಕೆ
ನಾವು ಐಪಿಸಿ ಮತ್ತು ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ (ಸಿಆರ್‌ಪಿಸಿ) ಕಾಯ್ದೆಗಳ ಮೂಲಕ ಆಸ್ಪತ್ರೆ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ರಕ್ಷಿಸಬೇಕೆಂದು ಒತ್ತಾಯಿಸುತ್ತೇವೆ. ಆಸ್ಪತ್ರೆಗಳನ್ನು ಸಂರಕ್ಷಿತ ವಲಯಗಳೆಂದು ಘೋಷಿಸಿ, ವೈದ್ಯರ ಮೇಲೆ ಹಲ್ಲೆ ನಡೆಸುವ ಅಪರಾಧಿಗಳಿಗೆ ತ್ವರಿತಗತಿಯಲ್ಲಿ ಕಠಿಣ ಶಿಕ್ಷೆಯಾಗಬೇಕೆಂದು ಜಯಲಾಲ್ ಒತ್ತಾಯಿಸಿದ್ದಾರೆ.
ಇನ್ನು ವೈದ್ಯರ ಮೇಲಿನ ದೌರ್ಜನ್ಯದ ಬಗ್ಗೆ ಶ್ವೇತಪತ್ರವನ್ನು ಬಿಡುಗಡೆ ಮಾಡಬೇಕೆಂದು ಜೂನ್ 15ರಂದು ಐಎಂಎ 'ರಾಷ್ಟ್ರೀಯ ಬೇಡಿಕೆ ದಿನ'(National Demand Day) ಆಯೋಜಿಸುತ್ತಿದೆ ಎಂದ ಅವರು, ಯೋಗ ಗುರು ಬಾಬಾ ರಾಮದೇವ್ ಅವರ ವಿವಾದಾತ್ಮಕ ಹೇಳಿಕೆ ವಿರುದ್ಧ ಕಾನೂನು ಹೋರಾಟ ಮುಂದುವರೆಯುತ್ತಿದೆ ಎಂದಿದ್ದಾರೆ.