ಚೆನ್ನೈ(ತಮಿಳುನಾಡು): ನೂತನವಾಗಿ ಸರ್ಕಾರ ರಚನೆ ಮಾಡಿರುವ ಎಂ.ಕೆ ಸ್ಟಾಲಿನ್ ನೇತೃತ್ವದ ಸರ್ಕಾರ ಇದೀಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಹತ್ವದ ಮಸೂದೆ ಜಾರಿಗೆ ತರಲು ಮುಂದಾಗಿದೆ. ವೃತ್ತಿಪರ ಕೋರ್ಸ್ಗಳಾದ ಇಂಜಿನಿಯರಿಂಗ್, ಮೀನುಗಾರಿಕೆ, ಕೃಷಿ, ಕಾನೂನು, ಪಶುವೈದ್ಯಕೀಯ ಸೇರಿ ವಿವಿಧ ವಿಷಯಗಳಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ಮೀಸಲಾತಿ ಕಡ್ಡಾಯಗೊಳಿಸಿದೆ.
ಸ್ಟಾಲಿನ್ ನೇತೃತ್ವದಲ್ಲಿ ಈ ಹಿಂದೆ ಸಚಿವ ಸಂಪುಟ ಸಭೆ ನಡೆದಿದ್ದ ಸಂದರ್ಭದಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಬರುವ ಬಜೆಟ್ ಅಧಿವೇಶನದಲ್ಲಿ ಈ ಮಸೂದೆ ಮಂಡನೆ ಮಾಡುವುದಾಗಿ ಮಾಹಿತಿ ಹಂಚಿಕೊಂಡಿದ್ದರು. ಅದರಂತೆ ಇಂದು ಮಸೂದೆ ಮಂಡನೆ ಮಾಡಲಾಗಿದ್ದು, ಇದಕ್ಕೆ ವಿಪಕ್ಷಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
ಕೊರೊನಾ ವೈರಸ್ ಹಾವಳಿಯಿಂದಾಗಿ ಬಡವರ ಮಕ್ಕಳು ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪಡೆದುಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಆದರೆ ಇದೀಗ ಎಲ್ಲ ಕಾಲೇಜ್ಗಳಲ್ಲಿ(ಸರ್ಕಾರಿ, ಸರ್ಕಾರಿಯೇತರ ಕಾಲೇಜ್) ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ. 7.5ರಷ್ಟು ಮೀಸಲಾತಿ ಕಡ್ಡಾಯವಾಗಿ ನೀಡಬೇಕು ಎಂದು ಸಿಎಂ ಮಾಹಿತಿ ನೀಡಿದರು.
ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ಮುರುಗೇಶನ್ ನೇತೃತ್ವದ ಈ ಆಯೋಗವು ಸರ್ಕಾರಿ ಶಾಲೆಗಳ ಕೆಲವೇ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದಾರೆ ಎಂಬುದನ್ನು ಎತ್ತಿ ತೋರಿಸಿದೆ. ಹೀಗಾಗಿ ಮೀಸಲಾತಿ ವಿಸ್ತರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಇದನ್ನೂ ಓದಿರಿ: ತಮಿಳುನಾಡಿನಲ್ಲಿ ಐತಿಹಾಸಿಕ ಕೃಷಿ ಬಜೆಟ್ ಮಂಡನೆ.. ಅನ್ನದಾತರಿಗೆ 34,220.65 ಕೋಟಿ ರೂ. ಮೀಸಲು!
ಕಳೆದ ವರ್ಷ ತಮಿಳುನಾಡಿನಲ್ಲಿ ಅಧಿಕಾರದಲ್ಲಿದ್ದ ಎಐಎಡಿಎಂಕೆ ಸರ್ಕಾರ ಕೂಡ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜ್ಗಳಲ್ಲಿ ಶೇ. 7.5ರಷ್ಟು ಮೀಸಲಾತಿ ಘೋಷಣೆ ಮಾಡಿತು. ತಮಿಳುನಾಡಿನಲ್ಲಿ ಹೊಸದಾಗಿ ಸರ್ಕಾರ ರಚನೆ ಮಾಡಿರುವ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಐತಿಹಾಸಿಕ ಕೃಷಿ ಬಜೆಟ್ ಮಂಡನೆ ಮಾಡಿ ಎಲ್ಲರ ಗಮನ ಸೆಳೆದಿದೆ.