ಗಾಜಿಯಾಬಾದ್(ಉತ್ತರ ಪ್ರದೇಶ): ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಶಾಶ್ವತಗೊಳಿಸಲು ಅದಕ್ಕೆ ಶಾಸನೀಯ ಮಾನ್ಯತೆಯನ್ನು ನೀಡಬೇಕೆಂದು ಒತ್ತಾಯಿಸಲು ನವದೆಹಲಿಯ ಕಡೆಗೆ ನವೆಂಬರ್ 29ರಂದು 60 ಟ್ರ್ಯಾಕ್ಟರ್ಗಳ ಮೆರವಣಿಗೆ ಮಾಡಲಾಗುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಮಂಗಳವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಈಗ ತೆರವುಗೊಳಿಸಿರುವ ರಸ್ತೆಗಳ ಮುಖಾಂತರವೇ ನವದೆಹಲಿಯ ಪಾರ್ಲಿಮೆಂಟ್ ಕಡೆಗೆ ತೆರಳಲಿದ್ದೇವೆ. ರಸ್ತೆಗಳಲ್ಲಿ ಪ್ರತಿಭಟನೆ ಮಾಡುವುದಿಲ್ಲ ಎಂದು ರಾಕೇಶ್ ಟಿಕಾಯತ್ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಹಿಂದಿನ ಬಾರಿ 200 ರೈತರು ಪಾರ್ಲಿಮೆಂಟ್ಗೆ ತೆರಳಿದ್ದರು. ಈ ಬಾರಿ ಸಾವಿರಾರು ರೈತರು ಪಾರ್ಲಿಮೆಂಟ್ ಕಡೆಗೆ ತೆರಳಲಿದ್ದಾರೆ. ಕೆಲವರಿಂದ ಮೂರು ಕೃಷಿ ಕಾನೂನುಗಳನ್ನು ಮರು ಜಾರಿಗೆ ತರುವ ಹೇಳಿಕೆಗಳು ಬರುತ್ತಿವೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಗೆ ಶಾಸನೀಯ ಮಾನ್ಯತೆ ನೀಡುವ ವಿಚಾರವಾಗಿ ಯಾವ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಅದರ ಹೊರತಾಗಿ ಕಳೆದ ಒಂದು ವರ್ಷದಲ್ಲಿ 750 ಮಂದಿ ರೈತರು ಸಾವನ್ನಪ್ಪಿದ್ದಾರೆ. ಈ ರೈತರ ಸಾವಿಗೆ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ರಾಕೇಶ್ ಟಿಕಾಯತ್ ಒತ್ತಾಯಿಸಿದರು.
Winter Session of Parliament: ನವೆಂಬರ್ 29ರಿಂದ ದೆಹಲಿಯಲ್ಲಿ ಸಂಸತ್ನ ಚಳಿಗಾಲದ ಅಧಿವೇಶನ ನಡೆಯಲಿದೆ. ದೆಹಲಿಯಲ್ಲಿ ಇತರ ಪ್ರತಿಭಟನೆಗಳ ಜೊತೆಗೆ ಟ್ರ್ಯಾಕ್ಟರ್ಗಳ ಮೆರವಣಿಗೆ ಮಾಡಲಾಗುತ್ತದೆ. ಈಗಾಗಲೇ ಸ್ವಲ್ಪ ಮಟ್ಟದ ಜಯ ಸಿಕ್ಕಿದ್ದು, ನವೆಂಬರ್ 26ರಂದು ಭಾಗಶಃ ವಿಜಯದ ದಿನವನ್ನು ಆಚರಣೆ ಮಾಡಲಾಗುತ್ತದೆ. ಉಳಿದ ಬೇಡಿಕೆಗಳನ್ನೂ ಸರ್ಕಾರದ ಮುಂದೆ ಇರಿಸಲಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮೂರು ಕೃಷಿ ಕಾನೂನು ರದ್ದು ವಿಚಾರ: ಇಂದು ಮಹತ್ವದ ಸಂಪುಟ ಸಭೆ