ಮಲಪ್ಪುರಂ: ಲಾಡ್ಜ್‌ನೊಳಗೆ ಬಂಧಿಸಿ ಇಬ್ಬರು ಮಕ್ಕಳ ಮೇಲೆ ತಂದೆ ಹಾಗೂ ಮಲತಾಯಿಯೇ ಕ್ರೂರವಾಗಿ ಥಳಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಪದ್ಮಪ್ರಿಯಾ( 6 ವರ್ಷ) ಮತ್ತು ದುವಾನೇಸನ್ (4 ವರ್ಷ)ನನ್ನು ನೀಲಂಬೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಮಲಪ್ಪುರಂನ ಮಾಂಬಾದ್‌ನ ಖಾಸಗಿ ವಸತಿಗೃಹವೊಂದರಲ್ಲಿ ವಾಸಿಸುತ್ತಿರುವ ತಮಿಳುನಾಡು ಮೂಲದ ತಂಕರಾಜನ್ ಅವರ ಮಕ್ಕಳು ಎಂಬುದಾಗಿ ಗುರುತಿಸಲಾಗಿದೆ.
ತಂಕರಾಜನ್ ಮತ್ತು ಅವರ 2ನೇ ಪತ್ನಿ ಮೈಯಮ್ಮು ತಿಂಗಳುಗಳಿಂದ ಮಕ್ಕಳನ್ನು ಕ್ರೂರವಾಗಿ ಹಿಂಸಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದ್ದು, ಇದೀಗ ಹಲ್ಲೆಗೊಳಗಾದ ಪದ್ಮಪ್ರಿಯಾ( 6 ವರ್ಷ) ಮುಖ ಹಾಗೂ ಕಣ್ಣುಗಳು ನೋವಿನಿಂದ ಊದಿಕೊಂಡಿದ್ದಲ್ಲದೇ, ದೇಹದ ಅನೇಕ ಭಾಗಗಳಲ್ಲಿ ಸುಟ್ಟ ಗಾಯದ ಗುರುತುಗಳು ಕಂಡುಬಂದಿವೆ. ಬಾಲಕ ದುವಾನೇಸನ್ ಕೂಡ ಗಾಯಗೊಂಡಿದ್ದಾನೆ.
ಘಟನೆ ಕುರಿತು ವಸತಿ ಗೃಹದ ಮುಂಭಾಗದ ಕೋಣೆಯಲ್ಲಿ ವಾಸವಾಗಿದ್ದ ಬಂಗಾಳದ ಸ್ಥಳೀಯರು ಬುಧವಾರ ಬೆಳಗ್ಗೆ 10.30 ರ ಸುಮಾರಿಗೆ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಂಬಾದ್ ಪಂಚಾಯಿತಿ ಉಪಾಧ್ಯಕ್ಷೆ ಪಿ.ಟಿ.ಉಮೈಮಾತ್, ಗ್ರಾಮ ಪಂಚಾಯಿತಿ ಸದಸ್ಯರು, ಆರೋಗ್ಯ ಇಲಾಖೆ ನೌಕರರು, ಸ್ಥಳೀಯರು ಮತ್ತು ಮಾಂಬಾದ್ ವಾಟ್ಸ್ಆ್ಯಪ್ ಸಮುದಾಯದ ಕಾರ್ಯಕರ್ತರು ಖಾಸಗಿ ವಸತಿಗೃಹವನ್ನು ತಲುಪಿ ಲಾಡ್ಜ್‌ನಲ್ಲಿ ಬಂಧಿಯಾಗಿದ್ದ ಮಕ್ಕಳನ್ನು ರಕ್ಷಿಸಿದ್ದಾರೆ.
ಓದಿ: ಕೃಷಿ ಕಾನೂನುಗಳಲ್ಲಿ ಸಮಸ್ಯೆಗಳಿದ್ದರೆ ತಿದ್ದುಪಡಿಗೆ ಸಿದ್ದ: ಪ್ರಧಾನಿ ಮೋದಿ
ಒಂದು ತಿಂಗಳಿನಿಂದ ಮಕ್ಕಳಿಗೆ ಹಿಂಸಿಸುತ್ತಿದ್ದಾರೆ ಎಂಬ ಲಾಡ್ಜ್ ನಿವಾಸಿಗಳ ದೂರಿನ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳನ್ನು ಪೋಷಕರೊಂದಿಗೆ ಕಳುಹಿಸಲು ಸಾಧ್ಯವಿಲ್ಲ, ಅವರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗುವುದು ಎಂದು ಪಂಚಾಯಿತಿ ಉಪಾಧ್ಯಕ್ಷೆ ಪಿ.ಟಿ.ಉಮೈಮಾತ್ ತಿಳಿಸಿದ್ದಾರೆ.