ಪುರ್ನಿಯಾ (ಬಿಹಾರ) : ಪುರ್ನಿಯಾದಲ್ಲಿ ಭೀಕರ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯ ಬದ್ರಕೋಠಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 6 ವರ್ಷದ ಮಗುವನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಷ್ಟೇ ಅಲ್ಲ, ಕೊಲೆಗಾರ ಮಗುವಿನ ಖಾಸಗಿ ಅಂಗವನ್ನು ಕತ್ತರಿಸುವುದರ ಜೊತೆಗೆ ದೇಹದ ಹಲವು ಭಾಗಗಳನ್ನೂ ಕತ್ತರಿಸಿದ್ದಾನೆ.
ಮೃತ ಮಗುವಿನ ಹೆಸರು ಗೌರವ್ ಕುಮಾರ್. ಕಳೆದ ಮೂರು ದಿನಗಳಿಂದ ಮಗು ಮನೆಯಿಂದ ನಾಪತ್ತೆಯಾಗಿತ್ತು. ಕೆಲವು ವರ್ಷಗಳ ಹಿಂದೆ ಮಗುವಿನ ತಾಯಿ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದರು. ಇನ್ನು ಮಗುವಿನ ತಂದೆ ಬೇರೆ ರಾಜ್ಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.
ಪೊಲೀಸರ ಬೇಜವಬ್ದಾರಿ : ಘಟನೆ ಕುರಿತು ಮಾಹಿತಿ ನೀಡಿದ ಮೃತ ಮಗುವಿನ ಚಿಕ್ಕಪ್ಪ ಜ್ಞಾನವರ್ಧನ್, ಕಳೆದ 3 ದಿನಗಳಿಂದ ಗೌರವ್ ನಾಪತ್ತೆಯಾಗಿದ್ದ. ಸಾಕಷ್ಟು ಹುಡುಕಾಟ ನಡೆಸಿದರೂ ಎಲ್ಲೂ ಸಿಗದ ಹಿನ್ನೆಲೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸದೆ 24 ಗಂಟೆ ನಂತರ ಪ್ರಕರಣ ದಾಖಲಿಸುವುದಾಗಿ ಹೇಳಿ ವಾಪಸ್ ಕಳುಹಿಸಿದ್ದರು ಎಂದು ವಿವರಿಸಿದ್ದಾರೆ.
ಎರಡು ದಿನಗಳ ಹುಡುಕಾಟದ ಬಳಿಕ ಮನೆಯ ಹಿಂಬದಿಯ ಖಾಲಿ ಮನೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಅವನ ದೇಹವನ್ನು ಕಂಬಳಿಯಲ್ಲಿ ಸುತ್ತಲಾಗಿತ್ತು. ಖಾಸಗಿ ಭಾಗವನ್ನೂ ಕತ್ತರಿಸಲಾಗಿದೆ. ನಮ್ಮ ಮಗುವನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಕುಟುಂಬಸ್ಥರು ನೋವು ತೋಡಿಕೊಂಡಿದ್ದಾರೆ.
ಖಾಸಗಿ ಭಾಗಗಳೆಲ್ಲ ಕಟ್: ಗೌರವ್ನ ಕತ್ತು ಸೀಳಿ ಚೂಪಾದ ಆಯುಧದಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ದೇಹದ ಹಲವೆಡೆ ಗಾಯಗಳಿರುವುದು ಕಂಡು ಬಂದಿದೆ. ಇದೇ ವೇಳೆ ಖಾಸಗಿ ಅಂಗಕ್ಕೂ ಚಾಕು ಹಾಕಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಗೌರವ್ ತನ್ನ ಅಜ್ಜ ಮತ್ತು ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದ. ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪೊಲೀಸರು ಕುಟುಂಬ ಸದಸ್ಯರ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕೋರ್ಟ್ಗೆ ಹಾಜರಾದ ನಟ ರಾಣಾ ದಗ್ಗುಬಾಟಿ