ವಾರಾಣಸಿ: ಹೊಸ ವರ್ಷದ ಮೊದಲ ಎಲ್ಲೆಲ್ಲೂ ಸಂಭ್ರಮ, ಉತ್ಸಾಹ ಮನೆ ಮಾಡಿತ್ತು. ದೇಶದ ಹಲವಾರು ಪೌರಾಣಿಕ, ಧಾರ್ಮಿಕ ಕ್ಷೇತ್ರಗಳು ಜನರಿಂದ ತುಂಬಿ ತುಳುಕುತ್ತಿದ್ದವು. ತಮ್ಮ ಇಷ್ಟದೇವರ ದರ್ಶನದೊಂದಿಗೆ ಹೊಸ ವರ್ಷವನ್ನು ಆರಂಭಿಸಬೇಕೆಂಬ ಇಚ್ಛೆಯಿಂದ ಲಕ್ಷಾಂತರ ಜನರು ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಅಂತೆಯೇ, ಉತ್ತರಪ್ರದೇಶದ ಕಾಶಿ ವಿಶ್ವನಾಥ ದೇವಾಲಯಕ್ಕೂ ಕೂಡ ಭಕ್ತಸಾಗರವೇ ಹರಿದು ಬಂದಿತ್ತು. ಈ ಬಾರಿ ವಿಶ್ವನಾಥ ದೇಗುಲಕ್ಕೆ ಬಂದ ಭಕ್ತರ ಸಂಖ್ಯೆ 6 ಲಕ್ಷ ದಾಟಿದೆ. ಡಿಸೆಂಬರ್ 31 ಮತ್ತು ಜನವರಿ 1ರಂದು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. 2022ರ ಸಂಪೂರ್ಣ ವರ್ಷದಲ್ಲಿ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಯಾತ್ರಾರ್ಥಿಗಳ ಸಂಖ್ಯೆಯು ಸಹ ಹೊಸ ದಾಖಲೆ ಬರೆದಿದೆ.
ಇದನ್ನೂ ಓದಿ: ಸಾಯಿ ಬಾಬಾಗೆ ಚಿನ್ನದ ಕಿರೀಟ ಅರ್ಪಿಸಿ ಹೊಸ ವರ್ಷ ಆರಂಭಿಸಿದ ಬೆಂಗಳೂರಿನ ದಂಪತಿ
ಪ್ರತಿ ಸಲ ಹೊಸ ವರ್ಷದಂದು ವಿಶ್ವನಾಥ ಧಾಮಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಯಲ್ಲಿ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ ವರ್ಷವೂ 3 ದಿನಗಳಲ್ಲಿ ಏಳು ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿ ದಾಖಲೆ ಬರೆದಿದ್ದರು. ಆದರೆ, ಈ ಬಾರಿ ಕೇವಲ 2 ದಿನಗಳಲ್ಲಿ 6 ಲಕ್ಷ ಭಕ್ತರು ಬಾಬಾ ವಿಶ್ವನಾಥ ಧಾಮಕ್ಕೆ ಬಂದಿದ್ದರು.
ಈ ಬಗ್ಗೆ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುನೀಲ್ ಕುಮಾರ್ ವರ್ಮಾ ಮಾತನಾಡಿ, 'ಹೊಸ ವರ್ಷದ ಮೊದಲ ದಿನ ಹಾಗೂ ಕಳೆದ ವರ್ಷದ ಕೊನೆಯ ದಿನ ವಿಶ್ವನಾಥನ ದರ್ಶನಕ್ಕೆ ಭಕ್ತರ ದಂಡೇ ಆಗಮಿಸಿತ್ತು. ಇಲ್ಲಿಗೆ ಬರುತ್ತಿರುವ ಜನರ ಸಂಖ್ಯೆಯಲ್ಲಿ ಇನ್ನೂ ಕೂಡ ಇಳಿಮುಖವಾಗಿಲ್ಲ. ಬಹುತೇಕ ಶಾಲೆಗಳಲ್ಲಿ ಚಳಿಗಾಲದ ರಜೆ ಇದೆ. ಇದರಿಂದ ಬಾಬಾ ಧಾಮದಲ್ಲಿ ನಿತ್ಯ ಜನಜಂಗುಳಿ ಇರುತ್ತದೆ. ಇಂದೂ ಸಹ ಮುಂಜಾನೆಯೇ ದೇವಾಲಯದ ಬಾಗಿಲು ತೆರೆಯಲಾಗಿದೆ. ದರ್ಶನ ಹಾಗೂ ಪೂಜೆಗೆ ಅಪಾರ ಸಂಖ್ಯೆಯಲ್ಲಿ ಸರತಿಸಾಲಿನಲ್ಲಿ ಭಕ್ತರು ಜಮಾಯಿಸಿದ್ದಾರೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಲ್ಲಂಗಡಿ, ಕಬ್ಬಿನ ಹಾಲು ಸೇವಿಸಿ ವಿಭಿನ್ನವಾಗಿ ಹೊಸ ವರ್ಷಾಚರಣೆ