ಮುಂಬೈ: ಸ್ಟಾಕ್ ಇಕ್ವಿಟಿ ಮಾರುಕಟ್ಟೆಗಳಲ್ಲಿನ ಬೆಂಚ್‌ಮಾರ್ಕ್ ಸೂಚ್ಯಂಕಗಳು ಆರು ದಿನಗಳ ನಷ್ಟದ ಸರಣಿಯನ್ನು ಮುರಿದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದವು. ಪ್ರಮುಖ ಸೂಚ್ಯಂಕಗಳಾದ ನಿಫ್ಟಿ 50, 150 ಪಾಯಿಂಟ್‌ಗಳ ಏರಿಕೆ ಕಂಡು 17,000 ಮಟ್ಟ ದಾಟಿದ್ದು, ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 399 ಪಾಯಿಂಟ್‌ಗಳ ಏರಿಕೆ ಕಂಡು 57,149 ರಲ್ಲಿ ವಹಿವಾಟು ನಡೆಸಿತು.
ಆರಂಭಿಕ ವಹಿವಾಟಿನಲ್ಲಿ ಟಾಟಾ ಕೆಮಿಕಲ್ಸ್, ಸೆಂಚುರಿ ಎಂಕಾ, ಫೋರ್ಬ್ಸ್, ಆಪ್ಟೆಕ್ ಮತ್ತು ಶ್ರೀಲೆದರ್ಸ್ ಲಾಭ ಗಳಿಸಿದವು. ಏಷ್ಯನ್ ಪೇಂಟ್ಸ್, ವೆಲ್ಸ್‌ಪನ್ ಇಂಡಿಯಾ, ಜೈಪ್ರಕಾಶ್ ಅಸೋಸಿಯೇಟ್ಸ್ ಮತ್ತು ಐಟಿಐ ಮುಂತಾದುವು ನಷ್ಟ ಅನುಭವಿಸಿದವು.
ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕಗಳು ತಲಾ 1 ಪ್ರತಿಶತದಷ್ಟು ಏರಿಕೆಯಾಗಿದ್ದು, ವಿಸ್ತೃತ ಮಾರುಕಟ್ಟೆಗಳ ಬೆಂಚ್‌ಮಾರ್ಕ್ ಸೂಚ್ಯಂಕಗಳನ್ನು ಮೀರಿಸಿದೆ. ನಿಫ್ಟಿ ಬ್ಯಾಂಕ್ ಶೇ 1.07ರಷ್ಟು ಏರಿಕೆ ಕಂಡು 38,162ಕ್ಕೆ ತಲುಪಿದೆ.
ಶುಕ್ರವಾರ ನಡೆಯಲಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ಫಲಿತಾಂಶವನ್ನು ಮಾರುಕಟ್ಟೆಯು ಎದುರು ನೋಡುತ್ತಿದೆ. ಹಣದುಬ್ಬರ ನಿಯಂತ್ರಿಸಲು ಮತ್ತು ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯವನ್ನು ತಡೆಯಲು ವಿದೇಶಿ ಬಂಡವಾಳದ ಒಳಹರಿವನ್ನು ಸುಧಾರಿಸಲು ಬಡ್ಡಿದರದಲ್ಲಿ 50 ಮೂಲಾಂಶಗಳ ಹೆಚ್ಚಳದ ನಿರೀಕ್ಷೆಗಳ ನಡುವೆ MPC ಹಣಕಾಸು ನೀತಿಯ ಕುರಿತು ಚರ್ಚೆಗಳನ್ನು ಪ್ರಾರಂಭಿಸಿದೆ.
ರೂಪಾಯಿಯ ದಾಖಲೆಯ ಕುಸಿತದಿಂದ ಹಣದುಬ್ಬರ ವಿರುದ್ಧದ ಹೋರಾಟ ಸಂಕೀರ್ಣಗೊಂಡಿರುವುದರಿಂದ ಆರ್‌ಬಿಐ ತನ್ನ ಪಾಲಿಸಿ ರೇಟ್ ಅನ್ನು ಸತತ ಮೂರನೇ ಬಾರಿಗೆ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ನಿರೀಕ್ಷೆಯಂತೆ ಬೆಳಗಿನ ವಹಿವಾಟಿನಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಬಲಗೊಂಡಿತು. ಬುಧವಾರದಂದು ಸ್ಥಳೀಯ ಕರೆನ್ಸಿಯು ಡಾಲರ್ ವಿರುದ್ಧ 81.94 ಕ್ಕೆ ಕೊನೆಗೊಂಡಿತ್ತು.
ಇದನ್ನೂ ಓದಿ: ಗೇಮಿಂಗ್ ಆ್ಯಪ್ ಹಗರಣ: ಕೋಲ್ಕತ್ತಾ ಉದ್ಯಮಿ ಮನೆಯಲ್ಲಿ ಇಡಿಗೆ ಸಿಕ್ತು 17 ಕೋಟಿ ರೂಪಾಯಿ!