ಮುಜಾಫರ್ಪುರ(ಬಿಹಾರ): ಗ್ರಾಮೀಣ ಬ್ಯಾಂಕ್ಗಳಲ್ಲಿ ತಾಂತ್ರಿಕ ದೋಷದಿಂದಾಗಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಜಮೆಯಾಗುತ್ತಿರುವ ವಿಚಿತ್ರ ಘಟನೆ ನಡೆಯುತ್ತಿರುವುದು ಮುಂದುವರೆದಿದೆ. ಅಂತಹ ಮತ್ತೊಂದು ಘಟನೆ ಬಿಹಾರದಲ್ಲಿ ವರದಿಯಾಗಿದೆ.
ಕಳೆದೆರಡು ದಿನಗಳ ಹಿಂದೆ ಕೂಲಿ ಕಾರ್ಮಿಕನ ಖಾತೆಗೆ 5.5 ಲಕ್ಷ ರೂ ಜಮಾವಣೆಗೊಂಡಿತ್ತು. ಇದರ ಬೆನ್ನಲ್ಲೇ ನಿನ್ನೆ ಶಾಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ದಾಖಲೆಯ 960 ಕೋಟಿ ರೂ. ಬಂದಿತ್ತು. ಈ ಎರಡು ಘಟನೆಗಳ ಬೆನ್ನಲ್ಲೇ ಇದೀಗ ವೃದ್ಧ ವ್ಯಕ್ತಿಯ ಅಕೌಂಟ್‌ಗೆ 52 ಕೋಟಿ ರೂ. ಜಮೆಯಾಗಿದೆ.
ರಾಮ್ ಬಹದ್ದೂರ್ ಶಾ ಅವರ ಗ್ರಾಮೀಣ ಬ್ಯಾಂಕ್ ಖಾತೆಯಲ್ಲಿ ಇದ್ದಕ್ಕಿದ್ದಂತೆ 52 ಕೋಟಿ ರೂ. ಜಮಾವಣೆಗೊಂಡಿದೆ. ವೃದ್ಧಾಪ್ಯ ವೇತನದ ಮೊತ್ತ ಪರಿಶೀಲನೆ ಮಾಡಲು ಹೋಗಿದ್ದ ಸಂದರ್ಭದಲ್ಲಿ ಅವರ ಅಕೌಂಟ್ನಲ್ಲಿ ಇಷ್ಟೊಂದು ಹಣ ಬಂದಿರುವುದು ತಿಳಿದು ಬಂದಿದೆ. ಅವರ ಖಾತೆಯಲ್ಲಿ ಇಷ್ಟೊಂದು ಹಣ ಜಮಾವಣೆಗೊಂಡಿರುವುದನ್ನು ನೋಡಿರುವ ಬ್ಯಾಂಕ್ ಸಿಬ್ಬಂದಿ ದಿಗ್ಬ್ರಾಂತರಾಗಿದ್ದಾರೆ. ತಕ್ಷಣವೇ ಈ ಸುದ್ದಿ ಎಲ್ಲೆಡೆ ಹಬ್ಬಿದೆ.
ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್, ಬ್ಯಾಂಕ್ನ ಕಂಪ್ಯೂಟರ್ನಲ್ಲಿ ಆಗಿರುವ ತಾಂತ್ರಿಕ ಸಮಸ್ಯೆಯಿಂದ ಕೆಲವರ ಖಾತೆಗಳಲ್ಲಿ ಇಷ್ಟೊಂದು ಹಣ ಜಮೆಯಾಗುತ್ತಿದೆ. ನಿಜವಾಗಿ ಈ ಹಣ ಅವರ ಖಾತೆಯಲ್ಲಿ ಇಲ್ಲ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇಬ್ಬರು ಶಾಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 960 ಕೋಟಿ ರೂ. ಜಮೆ: ಮುಂದೇನಾಯ್ತು ಗೊತ್ತೇ?
ಬಿಹಾರದ ಕತಿಹಾರದ ಅಜಮ್ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ಬರು ಶಾಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 960 ಕೋಟಿ ರೂಪಾಯಿ ಬಂದಿತ್ತು. ಇದರ ಬಗ್ಗೆ ಮಾತನಾಡಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಉದಯನ್ ಮಿಶ್ರಾ, ತಾಂತ್ರಿಕ ದೋಷದಿಂದಾಗಿ ಮಿನಿ ಸ್ಟೇಟ್ಮೆಂಟ್ನಲ್ಲಿ ಈ ರೀತಿಯ ಹಣ ಕಾಣಿಸುತ್ತಿದೆ ಎಂದಿದ್ದರು.