ಜಬಲ್ಪುರ (ಮಧ್ಯಪ್ರದೇಶ): ಇಲ್ಲಿನ ರೈಲ್ವೆ ಸಂರಕ್ಷಣಾ ಪಡೆ ಪೊಲೀಸರು ಕಾರ್ಯಾಚರಣೆ ಮಾಡಿ ಮಹಿಳೆಯರಿಬ್ಬರು ಸಾಗಿಸುತ್ತಿದ್ದ 50 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದು, ಮಹಿಳೆಯನ್ನ ಬಂಧಿಸಿದ್ದಾರೆ. ಕಾರ್ಯಚರಣೆ ವೇಳೆ ಇನ್ನೋರ್ವ ಮಹಿಳೆ ಪರಾರಿಯಾಗಿದ್ದಾರೆ.
50 ಲಕ್ಷ ರೂ. ನಗದು ತುಂಬಿದ್ದ ಬ್ಯಾಗ್ ಮುಂಬೈ ಕಡೆಗೆ ತೆರಳುತ್ತಿದ್ದ ರೈಲಿನಲ್ಲಿ ಸಾಗಿಸಲಾಗುತ್ತಿತ್ತು. ಮಾಹಿತಿ ಮೇರೆಗೆ ಹುಡುಕಾಟ ನಡೆಸಿದಾಗ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಮಹಿಳೆಯರು ಹವಾಲ ಹಣದ ಸಾಗಣೆಯಲ್ಲಿ ತೊಡಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಆದರೆ, ಇಷ್ಟೊಂದು ಹಣವನ್ನು ಮುಂಬೈನಲ್ಲಿ ಯಾರಿಗೆ ತಲುಪಿಸುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿಯಬೇಕಿದ್ದು, ಇವರ ತಂಡದಲ್ಲಿ ಇನ್ನಷ್ಟು ಮಹಿಳೆಯರು ಇರುವ ಕುರಿತು ಆರ್ಪಿಎಫ್ ಅನುಮಾನ ವ್ಯಕ್ತಪಡಿಸಿದೆ.
ಇಷ್ಟು ಮೊತ್ತದ ಹಣವನ್ನು ಮಹಿಳೆ ಯಾರ ಬಳಿಯಿಂದ ತಂದಿದ್ದಾರೆ. ಅಲ್ಲದೇ ಎಷ್ಟು ಸಮಯದಿಂದ ಈ ಕಾರ್ಯ ಮಾಡಲಾಗುತ್ತಿದೆ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.