ರಂಗಾರೆಡ್ಡಿ, ತೆಲಂಗಾಣ: ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿ ಕುಟುಂಬ ಯೋಜನಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ನಿನ್ನೆ ಇಬ್ಬರು ಮೃತಪಟ್ಟರೆ, ಇಬ್ಬರು ಬೇರೆ ಬೇರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇಂದು ಸಾವನ್ನಪ್ಪಿದ್ದಾರೆ.
ಇದೇ ತಿಂಗಳ 25ರಂದು ಇಬ್ರಾಹಿಂ ಪಟ್ಟಣ ಸರ್ಕಾರಿ ಸಿವಿಲ್ ಆಸ್ಪತ್ರೆಯಲ್ಲಿ 34 ಮಂದಿಗೆ ಕುಟುಂಬ ಯೋಜನೆ ಆಪರೇಷನ್ ಮಾಡಲಾಗಿತ್ತು. ಈ ಪೈಕಿ ನಾಲ್ವರು ಮಹಿಳೆಯರು ಅಸ್ವಸ್ಥರಾಗಿದ್ದರು. ಭಾನುವಾರ ಮತ್ತು ಸೋಮವಾರ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಆರೋಗ್ಯ ಸ್ಥಿತಿ ಹದಗೆಟ್ಟಿದ್ದ ಲಾವಣ್ಯ ಮತ್ತು ಮೌನಿಕಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 4ಕ್ಕೆ ತಲುಪಿದೆ.
ಮಹಿಳೆಯರ ಸಾವಿನ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು. ಸುದ್ದಿ ತಿಳಿಯುತ್ತಿದ್ದಂತೆ ನಾವು ಇಬ್ರಾಹಿಂಪಟ್ಟಣ ಆಸ್ಪತ್ರೆಗೆ ಬಂದು ಪರಿಸ್ಥಿತಿ ಪರಿಶೀಲಿಸಿದ್ದೇವೆ. ಅನುಭವಿ ವೈದ್ಯರು ಮಾತ್ರ ಕುಟುಂಬ ಯೋಜನೆ ಆಪರೇಷನ್ ಮಾಡುತ್ತಾರೆ. ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರವೀಂದರ್ ನಾಯ್ಕ್ ತಿಳಿಸಿದ್ದಾರೆ.
ಓದಿ: ಗರ್ಭನಿರೋಧಕ ವಿಧಾನಗಳ ಬಳಕೆ ಮೇಘಾಲಯ, ಮಿಜೋರಾಂ, ಬಿಹಾರದಲ್ಲಿ ಅತಿ ಕಡಿಮೆ: ವರದಿ