ನವದೆಹಲಿ: ಪ್ರಧಾನಿ ಮೋದಿ ಅವರು ಕೋವಿಡ್ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರೆಸಿದ್ದು, ಸರ್ಕಾರದ ವಿಫಲತೆಗಳ ವಿರುದ್ಧ ಶ್ವೇತ ಪತ್ರ ಹೊರಡಿಸಿ, ಹರಿಹಾಯ್ದಿದ್ದಾರೆ.
ಈ ಕುರಿತಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ರಾಹುಲ್, ಕೊರೊನಾ ಎರಡನೇ ಅಲೆಯಲ್ಲಿ ಮೃತಪಟ್ಟವರ ಪೈಕಿ ಶೇ 90ರಷ್ಟು ಮಂದಿ ಆಕ್ಸಿಜನ್ ಕೊರತೆಯಿಂದ ಕೊನೆಯುಸಿರೆಳೆದಿದ್ದಾರೆ. ಪ್ರಧಾನಿಯ ಕಣ್ಣೀರು ಮೃತಪಟ್ಟವರ ಕುಟುಂಬದ ಕಣ್ಣೀರನ್ನು ಒರೆಸುವುದಿಲ್ಲ. ಕಣ್ಣೀರು ಯಾವುದೇ ಪ್ರಾಣವನ್ನು ಉಳಿಸುವುದಿಲ್ಲ. ಪಶ್ಚಿಮ ಬಂಗಾಳದ ಚುನಾವಣೆ ವೇಳೆ ಕೊರೊನಾವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಟೀಕಿಸಿದ್ದಾರೆ.
ಕೋವಿಡ್ ಮೂರನೇ ಅಲೆ ದೇಶಕ್ಕೆ ಹಾನಿಕಾರಕವಾಗಲಿದೆ ಎಂದ ರಾಹುಲ್, ಈ ಬಗ್ಗೆ ಸರ್ಕಾರಕ್ಕೆ ನಿರ್ಲಕ್ಷ್ಯ ಇದೆ ಎಂದಿದ್ದಾರೆ. ನಾವು ಶ್ವೇತಪತ್ರ ಸಿದ್ಧಪಡಿಸಿದ್ದೇವೆ. ಕೇಂದ್ರದತ್ತ ಬೆರಳು ಮಾಡಿ ತೋರಿಸುವ ಕಾರಣಕ್ಕೆ ಈ ಶ್ವೇತ ಪತ್ರ ಸಿದ್ಧಪಡಿಸಿಲ್ಲ. ಕೊರೊನಾ ಮೂರನೇ ಅಲೆಗೆ ದೇಶ ಸಜ್ಜಾಗಿರಬೇಕೆಂಬುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ.
ವ್ಯಾಕ್ಸಿನೇಷನ್ಗೆ ಮೆಚ್ಚುಗೆ
ವ್ಯಾಕ್ಸಿನೇಷನ್ ಕೋವಿಡ್ ತಡೆಯಲು ಅತ್ಯಂತ ಮುಖ್ಯವಾದ ಅಸ್ತ್ರ. ದೇಶದಲ್ಲಿ ಶೇಕಡಾ ನೂರರಷ್ಟು ವ್ಯಾಕ್ಸಿನೇಷನ್ ಆಗಬೇಕಿದೆ. ಆಸ್ಪತ್ರೆಗಳು, ಬೆಡ್ಗಳು, ವೈದ್ಯಕೀಯ ಸಂಪನ್ಮೂಲಗಳು, ಆಕ್ಸಿಜನ್ ಉತ್ಪಾದನಾ ಘಟಕಗಳು ಅತ್ಯಂತ ಮುಖ್ಯ ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಶಾಕಿಂಗ್..! ಮದುವೆಯಾದ ಮೇಲೆ 'ಅವಳಲ್ಲ' ಅನ್ನೋದು ಯುವಕನಿಗೆ ಗೊತ್ತಾಯ್ತು!!
ಸೋಮವಾರ ಒಂದೇ ದಿನದಲ್ಲಿ ಶೇಕಡಾ 86.16 ಲಕ್ಷ ಮಂದಿಗೆ ವ್ಯಾಕ್ಸಿನೇಷನ್ ಹಾಕಿರುವುದಕ್ಕೆ ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ವ್ಯಾಕ್ಸಿನೇಷನ್ ಆಗುವವರೆಗೆ ಪ್ರತಿದಿನ ಈ ರೀತಿಯಾಗಿಯೇ ವ್ಯಾಕ್ಸಿನೇಷನ್ ಮುಂದುವರೆಯಬೇಕು ಎಂದಿದ್ದಾರೆ.
ನ್ಯಾಯ್ಗೆ ಬೇರೆ ಹೆಸರು ಬೇಕಿದ್ರೆ ಕೊಡಿ
ಕೋವಿಡ್ನಿಂದ ಜನರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋವಿಡ್ ಆರ್ಥಿಕತೆಗೂ ಮತ್ತು ಸಮಾಜಕ್ಕೂ ಒಂದು ರೋಗ. ನಾವು ಈ ಹಿಂದೆ ನ್ಯಾಯ್ ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದೆವು. ಈ ಪರಿಕಲ್ಪನೆಯನ್ನು ಬಳಸಿಕೊಂಡು ಜನರ ಬಳಿಗೆ ಹಣವನ್ನು ತಲುಪಿಸುವ ಕೆಲಸ ಪ್ರಧಾನಿ ಮಾಡಬೇಕಿದೆ. ಬೇಕಿದ್ದರೆ ನಾವು ನೀಡಿದ ನ್ಯಾಯ್ ಪದವನ್ನು ಬಳಸದೇ ತಮಗೆ ಬೇಕಾದ ಪದ ಬಳಸಿಕೊಳ್ಳಲಿ ಎಂದಿದ್ದಾರೆ.