ರುದ್ರಪುರ( ಉತ್ತರಾಖಂಡ್): ಮದುವೆಯಾದ ನಂತರ ಮಗಳನ್ನು ಗಂಡನ ಮನೆಗೆ ಬಿಟ್ಟು ಸಂತೋಷದಿಂದ ಮನೆಗೆ ವಾಪಸಾಗುತ್ತಿದ್ದ ಕುಟುಂಬದಲ್ಲಿ ಈಗ ನೀರವ ಮೌನ ಆವರಿಸಿದೆ. ರಸ್ತೆ ಅಪಘಾತದಲ್ಲಿ ಮದುಮಗಳ ತಾಯಿ ಮತ್ತು ಅಜ್ಜಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಾಪುರ ಬಳಿ ನಡೆದಿದೆ.
ಇಲ್ಲಿನ ಬಸಂತ್ ಗಾರ್ಡನ್ ಕಿಚಾ ನಿವಾಸಿ ಜಗದೀಶ್ ಅಗರ್ವಾಲ್ ಅವರ ಪುತ್ರಿ ಗದರ್‌ಪುರದಲ್ಲಿ ಸೋಮವಾರ ರಾತ್ರಿ ವಿವಾಹ ಮಾಡಿದ್ದರು. ಮಗಳನ್ನು ಗದರ್‌ಪುರದಲ್ಲಿ ಬಿಟ್ಟು ಕುಟುಂಬ ಮಂಗಳವಾರ ಬೆಳಗ್ಗೆ ಮನೆಗೆ ಮರಳುತ್ತಿತ್ತು. ಎಫ್‌ಸಿಐನಲ್ಲಿ ಕೆಲಸ ಮಾಡುತ್ತಿರುವ ಚರಣ್ ಸಿಂಗ್ ಇಂಟರ್ಯಾಕ್ ರ್ಯಾಕ್ ಕಾರ್ಖಾನೆಯ ಮುಂದೆ ಬೆಳಗ್ಗೆ ವಾಕ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕಾರಿಗೆ ಎದುರಾಗಿದ್ದಾರೆ. ಆ ವ್ಯಕ್ತಿಯನ್ನು ಉಳಿಸುವ ಭರದಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ದರು. ಬಳಿಕ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ ಘಟನೆ ಬಗ್ಗೆ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಚರಣ್ ಸಿಂಗ್ ಮತ್ತು ಕಾರಿನಲ್ಲಿದ್ದ ಕುಸುಮಲತಾ (55) ಮಂಜು (62) ಮತ್ತು ಇತರ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಪೊಲೀಸರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ಕಳುಹಿಸಿದ್ದಾರೆ. ಬಳಿಕ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಅಪಘಾತದ ಬಗ್ಗೆ ಮಾಹಿತಿ ಪಡೆದ ಕೂಡಲೇ ಬಿಜೆಪಿ ಶಾಸಕ ರಾಜೇಶ್ ಶುಕ್ಲಾ ಕುಟುಂಬ ಸದಸ್ಯರನ್ನು ಸಮಾಧಾನಪಡಿಸಲು ಸ್ಥಳಕ್ಕೆ ತೆರಳಿದ್ದರು.