ಧನ್ಬಾದ್/ಜಾರ್ಖಂಡ್: ಧನ್ಸಾರ್ ಪೊಲೀಸ್ ಠಾಣೆ ಪ್ರದೇಶದ ಗಾಂಧಿ ನಗರದಲ್ಲಿ ಯುವಕನೊಬ್ಬ ತನ್ನ ಕುಟುಂಬದ ಮೂವರನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ತಾಯಿ, ಮಲತಂದೆ ಮತ್ತು ತನ್ನ ಸಹೋದರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಮನೆಯ ಬಾಗಿಲಿನಿಂದ ರಕ್ತ ಹರಿಯುತ್ತಿರುವುದನ್ನು ನೋಡಿ ಅಕ್ಕಪಕ್ಕದ ಜನರು ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ತಲುಪಿ ಬಾಗಿಲು ತೆರೆದು ನೋಡಿದಾಗ ಮುನ್ನಾ ಯಾದವ್, ಮೀನಾ ಯಾದವ್ ಮತ್ತು ಅವರ ಪುತ್ರ ರೋಹಿತ್ ಯಾದವ್ ಶವಗಳು ರೂಮ್ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ರಾಹುಲ್ ಯಾದವ್ ಶವ ಬೆಡ್ ಮೇಲೆ ಕಂಡು ಬಂದಿದೆ.
ಮೀನಾ ಯಾದವ್ ಮುನ್ನಾ ಯಾದವ್ ಅವರನ್ನು 2ನೇ ಮದುವೆಯಾಗಿದ್ದರು. ರಾಹುಲ್ ಯಾದವ್, ಮೀನಾ ಯಾದವ್ ಅವರ ಮೊದಲನೇ ಗಂಡನ ಮಗ. ರೋಹಿತ್ ಯಾದವ್ ಮುನ್ನಾ ಯಾದವ್ ಮಗ. ರಾಹುಲ್ ತನ್ನ ಮಲತಂದೆ, ಸಹೋದರ ಮತ್ತು ತಾಯಿಯೊಂದಿಗೆ ಏನಾದರೂ ವಿಷಯಕ್ಕೆ ಜಗಳ ಮಾಡುತ್ತಲೇ ಇದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಇದೇ ರೀತಿ ಜಗಳ ನಡೆಯುವ ವೇಳೆ ಕೋಪ ವಿಕೋಪಕ್ಕೆ ತಿರುಗಿ ಮೂವರನ್ನೂ ರಾಹುಲ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಎಲ್ಲರನ್ನೂ ಕೊಂದು ಬಳಿಕ ತಾನೂ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.