ಶ್ರೀ ಗಂಗಾ ನಗರ (ರಾಜಸ್ಥಾನ): ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಒಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಶ್ರೀ ಗಂಗಾ ನಗರದಲ್ಲಿ ನಡೆದಿದೆ.
ಅನುಪ್‌ಗಢ್ ಪಟ್ಟಣದಲ್ಲಿ ಹುಟ್ಟುಹಬ್ಬದ ಪ್ರಯುಕ್ತ ಪಾರ್ಟಿ ಮಾಡಿ, ಹಿಂತಿರುಗುತ್ತಿದ್ದಾಗ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗ್ಯಾಸ್ ಕಟ್ಟರ್‌ಗಳ ಸಹಾಯದಿಂದ ಕಾರಿನ ಒಳಗೆ ಸಿಲುಕಿದ ಮೃತ ದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಶಿಕಾರಿಪುರ: ಭೀಕರ ಅಪಘಾತದಲ್ಲಿ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವು
ಜಿತೇಂದ್ರ (25), ಅಂಕುಶ್ (23), ಸಾಹಿಲ್ ಜುನೇಜಾ (22) ಮತ್ತು ರೋಹಿತ್ (23) ಮೃತರು. ಓರ್ವ ವ್ಯಕ್ತಿ ವಾಸಿಂ ಅಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ನಾಲ್ಕು ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಅಪಘಾತದ ಬಗ್ಗೆ ತನಿಖೆ ಆರಂಭಿಸಿದ್ದಾರೆ.