ಚಂಡೀಗಢ (ಪಂಜಾಬ್): ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಪಂಜಾಬ್ ವಿಜಿಲೆನ್ಸ್ ಬ್ಯೂರೋ ಕಳೆದ 2022ರಲ್ಲಿ 172 ಆರೋಪಿಗಳನ್ನು ಬಂಧಿಸಿದೆ. ಇದರಲ್ಲಿ ನಾಲ್ವರು ಮಾಜಿ ಸಚಿವರು, ಐಎಎಸ್ ಅಧಿಕಾರಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಇಬ್ಬರು ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಸಹಾಯಕ ಪೊಲೀಸ್ ಮಹಾನಿರೀಕ್ಷಕರು ಸಹ ಸೇರಿದ್ದಾರೆ ಎಂದು ಬ್ಯೂರೋದ ಮುಖ್ಯ ನಿರ್ದೇಶಕ ಮತ್ತು ಎಡಿಜಿಪಿ ವರೀಂದರ್ ಕುಮಾರ್ ತಿಳಿಸಿದ್ದಾರೆ.
ಕಳೆದ ವರ್ಷದ ದಾಖಲಾದ 129 ಲಂಚ ಪ್ರಕರಣಗಳಲ್ಲಿ ಈ 172 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ 172 ಆರೋಪಿಗಳ ಪೈಕಿ 65 ಟ್ರ್ಯಾಪ್ (ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ) ಪ್ರಕರಣಗಳಲ್ಲಿ 83 ಜನ ಮತ್ತು 64 ಆನ್‌ಲೈನ್ ದೂರುಗಳಲ್ಲಿ 89 ಮಂದಿ ಸೇರಿದ್ದಾರೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಲಂಚ ಪ್ರಕರಣಗಳ ದಾಖಲು, ಭ್ರಷ್ಟಾಚಾರದ ಆರೋಪಿಗಳ ಬಂಧನ, ಕ್ರಿಮಿನಲ್ ಮೊಕದ್ದಮೆಗಳ ದಾಖಲು ಮತ್ತು ಆರೋಪಿಗಳ ಬಂಧಿಸುವಲ್ಲಿ ಬ್ಯೂರೋ ದಾಖಲೆ ನಿರ್ಮಿಸಿದೆ ಎಂದು ಹೇಳಿದ್ದಾರೆ.
ನಾಲ್ವರು ಮಾಜಿ ಸಚಿವರ ಬಂಧನ: ಹೈ-ಪ್ರೊಫೈಲ್ ಪ್ರಕರಣಗಳ ವಿವರವನ್ನೂ ನೀಡಿದ ಎಡಿಜಿಪಿ, ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮಾಜಿ ಸಚಿವರಾದ ಸಾಧು ಸಿಂಗ್ ಧರ್ಮ್ಸೋತ್, ಸಂಗತ್ ಸಿಂಗ್ ಗಿಲ್ಜಿಯಾನ್, ಭರತ್ ಭೂಷಣ್ ಆಶು ಮತ್ತು ಸುಂದರ್ ಶಾಮ್ ಅರೋರಾ ಅವರನನ್ನೂ ಬಂಧಿಸಲಾಗಿದೆ. ಅಲ್ಲದೇ, ಅಮೃತಸರದ ಸುಧಾರಣಾ ಟ್ರಸ್ಟ್‌ನ ಮಾಜಿ ಅಧ್ಯಕ್ಷ ದಿನೇಶ್ ಬಸ್ಸಿ, ಐಎಎಸ್ ಅಧಿಕಾರಿ ಸಂಜಯ್ ಪೊಪ್ಲಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪರ್ವೀನ್ ಕುಮಾರ್, ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿಶಾಲ್ ಚೋಹನ್ ಮತ್ತು ಅಮಿತ್ ಚೋಹನ್, ವಿಭಾಗೀಯ ಅರಣ್ಯಾಧಿಕಾರಿ ಗುರಮನ್ಪ್ರೀತ್ ಸಿಂಗ್ ಹಾಗೂ ಗುತ್ತಿಗೆದಾರ ಹರ್ಮಿಂದರ್ ಸಿಂಗ್ ಹಮ್ಮಿ, ಸಹಾಯಕ ಪೊಲೀಸ್ ಮಹಾನಿರೀಕ್ಷಕ ಆಶಿಶ್ ಕಪೂರ್ ಸಹ ಬಂಧನವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 'Proud of you Bhagwant' : ಪಂಜಾಬ್ ಆರೋಗ್ಯ ಸಚಿವರ ಬಂಧನದ ಬೆನ್ನಲ್ಲೇ ಕೇಜ್ರಿವಾಲ್ ಮೆಚ್ಚುಗೆ!
ಇದಲ್ಲದೇ, ಪಿಯುಎನ್ಎಸ್ಯುಪಿ ಜನರಲ್ ಮ್ಯಾನೇಜರ್ ನವೀನ್ ಕುಮಾರ್ ಗಾರ್ಗ್, ಜಿಲ್ಲಾ ಕಮಾಂಡರ್ ಪಂಜಾಬ್ ಹೋಮ್ ಗಾರ್ಡ್ಸ್ ನಿರ್ಮಲಾ ಮತ್ತು ಪ್ಲಟೂನ್ ಕಮಾಂಡರ್ ಅನ್ಮೋಲ್ ಮೋತಿ, ಅಬಕಾರಿ ಮತ್ತು ತೆರಿಗೆ ಅಧಿಕಾರಿ ಸಂದೀಪ್ ಸಿಂಗ್ ಮತ್ತು ಗುತ್ತಿಗೆದಾರರಾದ ತೇಲು ರಾಮ್, ಯಶಪಾಲ್ ಮತ್ತು ಅಜಯ್ಪಾಲ್ ವಿರುದ್ಧ ವಿವಿಧ ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಲಂಚಕೋರರಿಗೆ ಕಡಿವಾಣ ಹಾಕಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಾರ್ಯವನ್ನು ಬ್ಯೂರೋ ಮಾಡುತ್ತಿದೆ ಎಂದು ವರೀಂದರ್ ಕುಮಾರ್ ವಿವರಿಸಿದ್ದಾರೆ.
ಮುಖ್ಯಮಂತ್ರಿಗಳ ಭ್ರಷ್ಟಾಚಾರ ವಿರೋಧಿ ಆಕ್ಷನ್ ಲೈನ್: ಕಳೆದ ವರ್ಷದ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ 30, ಕಂದಾಯ ಇಲಾಖೆಯಲ್ಲಿ 13, ವಿದ್ಯುತ್ ಇಲಾಖೆಯಲ್ಲಿ ಐವರು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ನಾಲ್ವರುಲಂಚ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ರಾಜ್ಯ ಸಾರ್ವಜನಿಕ ಕಚೇರಿಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಜನರೇ ಮಾಹಿತಿ ನೀಡುವಂತೆ ಉತ್ತೇಜಿಸಲು ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮಾರ್ಚ್ 23ರಂದು 'ಮುಖ್ಯಮಂತ್ರಿಗಳ ಭ್ರಷ್ಟಾಚಾರ ವಿರೋಧಿ ಆಕ್ಷನ್ ಲೈನ್' ಯೋಜನೆಯನ್ನು ಪ್ರಾರಂಭಿಸಿದ್ದರು. ಇದು ಗಮನಾರ್ಹ ಫಲಿತಾಂಶಗಳನ್ನು ನೀಡುತ್ತಿದೆ. ಈ ಸಹಾಯವಾಣಿಗೆ ಕಳೆದ ವರ್ಷ 3,72,175 ದೂರುಗಳು ಬಂದಿದ್ದು, ಇವುಗಳಲ್ಲಿ 6,407 ದೂರುಗಳು ಆಡಿಯೋ ಅಥವಾ ವಿಡಿಯೋ ರೆಕಾರ್ಡಿಂಗ್ ಸಮೇತದ ದೂರುಗಳು ಬಂದಿದೆ. ಎಂದು ಹೇಳಿದರು.
ಇದೇ ವೇಳೆ ಬ್ಯೂರೋದ ಕಾರ್ಯಕ್ಷಮತೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿರುವ ಎಡಿಜಿಪಿ ಕುಮಾರ್, ಬ್ಯೂರೋವು 371 ಆರೋಪಿಗಳ ವಿರುದ್ಧ 135 ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದೆ. ಇದರಲ್ಲಿ 35 ಗೆಜೆಟೆಡ್ ಅಧಿಕಾರಿಗಳು, 163 ಗೆಜೆಟೆಡ್ ಅಲ್ಲದ ಅಧಿಕಾರಿಗಳು ಮತ್ತು ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಹಾಗೂ 173 ಖಾಸಗಿ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ಇದಲ್ಲದೆ, ಕಳೆದ ವರ್ಷದಲ್ಲಿ 35 ಗೆಜೆಟೆಡ್ ಅಧಿಕಾರಿಗಳು, 58 ಎನ್‌ಜಿಒಗಳು ಮತ್ತು 46 ಖಾಸಗಿ ವ್ಯಕ್ತಿಗಳನ್ನು ಒಳಗೊಂಡಿರುವ ಭ್ರಷ್ಟಾಚಾರ ದೂರುಗಳ ತನಿಖೆಗಾಗಿ 139 ಶಂಕಿತರ ವಿರುದ್ಧ 103 ವಿಜಿಲೆನ್ಸ್ ವಿಚಾರಣೆಗಳನ್ನು ಸಹ ದಾಖಲಿಸಲಾಗಿದೆ ಎಂದಿದ್ದಾರೆ.
ಇಷ್ಟೇ ಅಲ್ಲ, ಒಬ್ಬ ಗೆಜೆಟೆಡ್ ಅಧಿಕಾರಿ ಮತ್ತು ಎನ್‌ಜಿಒ ವಿರುದ್ಧ ಎರಡು ಅಕ್ರಮ ಆಸ್ತಿ ಪ್ರಕರಣಗಳನ್ನು ದಾಖಲಿಸಲಾಗಿದೆ. ವಿವಿಧ ನ್ಯಾಯಾಲಯಗಳಲ್ಲಿ ಶಿಕ್ಷೆಯ ಕಾರಣದಿಂದ ಎರಡು ಎನ್‌ಜಿಒಗಳನ್ನು ಆಯಾ ಆಡಳಿತ ಇಲಾಖೆಗಳು ತಮ್ಮ ಸೇವೆಗಳಿಂದ ವಜಾಗೊಳಿಸಿವೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾದ 19 ವಿಜಿಲೆನ್ಸ್ ಪ್ರಕರಣಗಳಲ್ಲಿ ಆರೋಪಿಗಳಾದ ಇಬ್ಬರು ಗೆಜೆಟೆಡ್ ಅಧಿಕಾರಿಗಳು, 18 ಎನ್‌ಜಿಒಗಳು ಮತ್ತು 10 ಖಾಸಗಿ ವ್ಯಕ್ತಿಗಳಿಗೆ ವಿಶೇಷ ನ್ಯಾಯಾಲಯಗಳು ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿವೆ ಎಂದು ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ ಆರೋಪ: ಹೆಂಡತಿ ಜತೆ ಶಾಪಿಂಗ್ ಮಾಡುತ್ತಿರುವಾಗಲೇ ಎಎಎಸ್ ಅಧಿಕಾರಿ ಬಂಧನ