ನವದೆಹಲಿ: ಕೋವಿಡ್ ಸಾಂಕ್ರಾಮಿಕದಿಂದ ಮೃತಪಟ್ಟವರ ಸಂಬಂಧಿಗಳಿಗೆ ಮರಣ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಮರಣ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ಕ್ಲಿಷ್ಟಕರವಾಗಿದ್ದು, ಇವುಗಳನ್ನು ಸರಳಗೊಳಿಸಬೇಕೆಂದು ಜೂನ್ 30ರಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಅನಿರುದ್ಧ ಬೋಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ 11ರಂದು ಮರಣ ಪ್ರಮಾಣಪತ್ರ ನೀಡುವ ಪ್ರಕ್ರಿಯೆ ಸರಳಗೊಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಬೇಕು ಎಂದಿರುವ ಕೋರ್ಟ್, ನಾವು ಈಗಾಗಲೇ ಆದೇಶ ನೀಡಿದ್ದೇವೆ. ಈಗಾಗಲೇ ಸಮಯವನ್ನು ವಿಸ್ತರಿಸಿದ್ದೇವೆ. ನೀವು ಈ ಪ್ರಕ್ರಿಯೆಯನ್ನು ಸರಳಗೊಳಿಸುವ ಹೊತ್ತಿಗೆ ಮೂರನೇ ಕೋವಿಡ್ ಅಲೆಯೂ ಮುಗಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿತು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈಗಾಗಲೇ ಈ ಪ್ರಕ್ರಿಯೆ ಚಾಲನೆಯಲ್ಲಿದೆ. ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಸುಪ್ರೀಂಕೋರ್ಟ್ಗೆ ಭರವಸೆ ನೀಡಿ, ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಮನವಿ ಸಲ್ಲಿಸಿದರು.
ನ್ಯಾಯಾಧೀಶರಾದ ಗೌರವ್ ಕುಮಾರ್ ಬನ್ಸಾಲ್, ಕೇಂದ್ರ ಸರ್ಕಾರ ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು ಎಂದಿದ್ದು, ನಂತರ ವಾದ-ಪ್ರತಿವಾದಗಳನ್ನು ಆಲಿಸಿ, ಸೆಪ್ಟೆಂಬರ್ 11 ಅಥವಾ ಅದಕ್ಕಿಂತ ಮೊದಲು ಈ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿ, ವಿಚಾರಣೆ ಮುಂದೂಡಿತು.
ಇದನ್ನೂ ಓದಿ: 'ಮಹಿಳೆಯರ ಹಕ್ಕುಗಳನ್ನು ಗೌರವಿಸಿ..': ಅಫ್ಘಾನಿಸ್ತಾನದ ರಾಷ್ಟ್ರಪತಿ ಭವನದ ಮುಂದೆ ಮಹಿಳೆಯರ ಪ್ರತಿಭಟನೆ