ಚಂಡೀಗಢ(ಪಂಜಾಬ್) : ಪಂಜಾಬ್ ಚುನಾವಣೆ ಸಂದರ್ಭದಲ್ಲಿ ಅಲ್ಲಿನ ಜನರಿಗೆ ನೀಡಿರುವ ಪ್ರಮುಖ ಭರವಸೆ ಈಡೇರಿಸುವಲ್ಲಿ ಆಮ್ ಆದ್ಮಿ ಪಕ್ಷ ಯಶಸ್ವಿಯಾಗಿದೆ. ಮುಂದಿನ ತಿಂಗಳು ಜುಲೈ 1ರಿಂದ ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ತಿಳಿಸಿದ್ದಾರೆ.
ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷ ಪಂಜಾಬ್ನಲ್ಲಿ ಒಂದು ತಿಂಗಳು ಅಧಿಕಾರ ಪೂರೈಕೆ ಮಾಡಿದೆ. ಇದರ ಬೆನ್ನಲ್ಲೇ ಈ ಮಹತ್ವದ ಘೋಷಣೆ ಹೊರ ಹಾಕಿದೆ. ಈ ಮೂಲಕ ಅಲ್ಲಿನ ಜನರ ಮೆಚ್ಚುಗೆ ಗಳಿಸುವಲ್ಲಿ ಭಗವಂತ್ ಮಾನ್ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಪಂಜಾಬ್ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದಲೂ ಪಂಜಾಬ್ ಸಿಎಂ ಭಗವಂತ್ ಮಾನ್ ಒಂದಿಲ್ಲೊಂದು ರೀತಿಯ ವಿಭಿನ್ನ ವಿಷಯಗಳಿಂದ ಹೆಚ್ಚು ಮೆಚ್ಚುಗೆ ಗಳಿಸುತ್ತಿದ್ದು, ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ 25,000 ಉದ್ಯೋಗಿಗಳ ನೇಮಕಾತಿಗೆ ಆದೇಶ ಹೊರಡಿಸಿದ್ದರು.
ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಭಗವಂತ್ ಮಾನ್ ಸರ್ಕಾರದಿಂದ ಬಿಸಿ: ಶುಲ್ಕ ಹೆಚ್ಚಳಕ್ಕೆ ಕಡಿವಾಣ
ಇದರ ಬೆನ್ನಲ್ಲೇ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಿಸುವುದರ ಮೇಲೆ ಕಡಿವಾಣ ಹಾಕಿದ್ದ ಸಿಎಂ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕದಲ್ಲಿ ಯಾವುದೇ ರೀತಿಯ ಹೆಚ್ಚಳ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದರು. ಇದರ ಜೊತೆಗೆ ತಾವು ಗುರುತು ಮಾಡಿರುವ ಅಂಗಡಿಯಿಂದಲೇ ಪುಸ್ತಕ ಮತ್ತು ಸಮವಸ್ತ್ರ ಖರೀದಿ ಮಾಡುವಂತೆ ಸೂಚನೆ ನೀಡಬಾರದು ಎಂದು ತಿಳಿಸಿದ್ದಾರೆ.
ಮಕ್ಕಳ ಪೋಷಕರು ತಮ್ಮ ಇಚ್ಛೆಯಂತೆ ಸಮವಸ್ತ್ರ ಹಾಗೂ ಪುಸ್ತಕ ಖರೀದಿ ಮಾಡಲು ಅವಕಾಶ ನೀಡುವಂತೆಯೂ ಪ್ರಕಟಣೆ ಹೊರಡಿಸಿದ್ದರು. ಕಳೆದ ಮಾರ್ಚ್ ತಿಂಗಳಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆ ಫಲಿತಾಂಶ ಬಹಿರಂಗಗೊಂಡಿದೆ. ಆಮ್ ಆದ್ಮಿ ಪಕ್ಷ 92 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿ, ಅಧಿಕಾರದ ಚುಕ್ಕಾಣಿ ಹಿಡಿದಿದೆ.