ಮುಂಬೈ: ಮಹಾರಾಷ್ಟ್ರ ಸಾರಿಗೆ ಸಂಸ್ಥೆ ನೌಕರರು ಇತ್ತೀಚೆಗೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಿದ್ದರು. ಆಗ ನ್ಯಾಯಾಲಯ ನೇಮಿಸಿದ್ದ ತ್ರಿಸದಸ್ಯ ಸಮಿತಿಯು ಪ್ರತಿ ತಿಂಗಳ 10ನೇ ತಾರೀಖಿನೊಳಗೆ ವೇತನ ನೀಡಲು ಸೂಚನೆ ನೀಡಿತ್ತು. ಆದರೆ, ಈ ತಿಂಗಳು 12ನೇ ತಾರೀಕು ಕಳೆದರೂ ಸರಕಾರದಿಂದ ಹಣ ಬಂದಿಲ್ಲದ ಕಾರಣ ನೌಕರರಿಗೆ ವೇತನ ಸಿಕ್ಕಿಲ್ಲ.
ಹೀಗಾಗಿ ಸಚಿವಾಲಯದಲ್ಲಿರುವ ಹಣಕಾಸು ಇಲಾಖೆ ಅಧಿಕಾರಿಗಳು ಸರಕಾರಕ್ಕೆ ನಿಷ್ಠರಾಗಿಲ್ಲ ಎಂದು ಮಹಾರಾಷ್ಟ್ರ ಎಸ್‌ಟಿ ಕರ್ಮಚಾರಿ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಶ್ರೀರಂಗ ಬಾರ್ಗೆ ಆರೋಪಿಸಿದ್ದಾರೆ. ನ್ಯಾಯಾಲಯದ ಆದೇಶ ಪಾಲನೆ ಮಾಡದೇ ಇರುವುದಕ್ಕಾಗಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಮಹಾರಾಷ್ಟ್ರ ಎಸ್‌ಟಿ ಕಾರ್ಮಿಕರ ಸಂಘ ಎಚ್ಚರಿಕೆ ನೀಡಿತ್ತು. ಇದರ ನಂತರ, ಇಂದು ರಾಜ್ಯ ಸರ್ಕಾರ ನೌಕರರ ವೇತನಕ್ಕಾಗಿ 300 ಕೋಟಿ ನಿಧಿಯನ್ನು ಅನುಮೋದಿಸಿದೆ.
ಏನಿದು ನೌಕರರ ಸಮಸ್ಯೆ: ಎಸ್‌ಟಿ ನೌಕರರು ಪ್ರತಿ ತಿಂಗಳು 7ನೇ ತಾರೀಕಿನಂದು ವೇತನ ಪಡೆಯುತ್ತಿದ್ದರು. ಆದರೆ ಕೆಲ ಸಮಯದ ನಂತರ ಸಮಯಕ್ಕೆ ಸರಿಯಾಗಿ ಸಂಬಳ ಸಿಗುವುದು ಕಷ್ಟವಾಯಿತು. ಸಮಯಕ್ಕೆ ಸರಿಯಾಗಿ ವೇತನ ಸಿಗದ ಕಾರಣ ಸಾರಿಗೆ ಸಂಸ್ಥೆಯನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನ ಮಾಡುವಂತೆ ಆಗ್ರಹಿಸಿ ಮುಷ್ಕರ ನಡೆಸಿದ್ದರು. ಈ ವಿಚಾರವಾಗಿ ನೌಕರರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದಾಗ ನ್ಯಾಯಾಲಯ ತ್ರಿಸದಸ್ಯ ಸಮಿತಿಯೊಂದನ್ನು ನೇಮಿಸಿತ್ತು. ಈ ಸಮಿತಿಯು ಪ್ರತಿ ತಿಂಗಳು 7 ರಿಂದ 10 ನೇ ತಾರೀಕಿನೊಳಗೆ ವೇತನ ನೀಡಲು ಒಪ್ಪಿಗೆ ನೀಡಿತ್ತು. ಆದರೆ ಈಗ 12 ನೇ ತಾರೀಕು ಕಳೆದರೂ ನೌಕರರಿಗೆ ವೇತನ ನೀಡಿಲ್ಲ ಎಂದು ಬಾರ್ಗೆ ಮಾಹಿತಿ ನೀಡಿದರು.
ಸರ್ಕಾರದ ಮಾತು ಕೇಳದ ಅಧಿಕಾರಿಗಳು: ಎಸ್‌ಟಿ ನೌಕರರ ಸಮಸ್ಯೆ ಬಗ್ಗೆ ಸರ್ಕಾರದ ಹಣಕಾಸು ಖಾತೆ ಗಂಭೀರವಾಗಿಲ್ಲ. ಶಿಂದೆ - ಫಡ್ನವೀಸ್ ಸರಕಾರ ಬಂದ ನಂತರ ಕಾರ್ಮಿಕರ ಪಿಎಫ್, ಗ್ರಾಚ್ಯುಟಿ, ಬ್ಯಾಂಕ್ ಸಾಲ ಮತ್ತಿತರ 978 ಕೋಟಿ ರೂ. ಮೊತ್ತ ನೌಕರರಿಗೆ ಬರುವುದು ಬಾಕಿ ಇದೆ. ಎಸ್‌ಟಿ ನಿಗಮವು ಈ ಬಗ್ಗೆ ಸರ್ಕಾರದ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಿದೆ. ಆದರೆ, ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಆರ್ಥಿಕ ಇಲಾಖೆ ಅಧಿಕಾರಿಗಳು ಸಿದ್ಧರಿಲ್ಲ. ಇದರಿಂದ ಸಚಿವಾಲಯದಲ್ಲಿರುವ ಹಣಕಾಸು ಇಲಾಖೆ ಅಧಿಕಾರಿಗಳು ಸರಕಾರದತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪಗಳಿಗೆ ಪುಷ್ಟಿ ಸಿಕ್ಕಂತಾಗಿದೆ.
ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಗೆ ಚಿಂತನೆ: ಏತನ್ಮಧ್ಯೆ, ಮಹಾರಾಷ್ಟ್ರ ಎಸ್‌ಟಿ ವರ್ಕರ್ಸ್ ಯೂನಿಯನ್ 23 ಆಗಸ್ಟ್ 2021 ರಂದು ಅನಿಯಮಿತ ವೇತನದ ಬಗ್ಗೆ ಕೈಗಾರಿಕಾ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಈ ಅರ್ಜಿ ಮೇಲೆ ನ್ಯಾಯಾಲಯವು ಸೆಪ್ಟೆಂಬರ್ 3, 2021 ರಂದು ಮಧ್ಯಂತರ ಆದೇಶ ನೀಡಿತ್ತು. ಎಸ್‌ಟಿ ಕಾರ್ಮಿಕರಿಗೆ ಮೂಲ ಅರ್ಜಿಯ ಮೇಲಿನ ವಿಚಾರಣೆ ಮುಗಿಯುವವರೆಗೆ ಪ್ರತಿ ತಿಂಗಳ ನಿಗದಿತ ದಿನಾಂಕದಂದು ವೇತನ ನೀಡಬೇಕು ಎಂದು ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು.
ಆದರೆ, ಈಗ ನೌಕರರಿಗೆ ಜನವರಿ 12ರ ನಂತರವೂ ವೇತನ ಸಿಕ್ಕಿಲ್ಲವಾದ್ದರಿಂದ ಕೂಡಲೇ ವೇತನ ನೀಡಬೇಕು. ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಹಿರಿಯ ವಕೀಲ ಪಿ. ಶಂಕರ್ ಶೆಟ್ಟಿ ಅವರು ಮಹಾರಾಷ್ಟ್ರ ಎಸ್‌ಟಿ ಕಾರ್ಮಿಕರ ಸಂಘದ ಪರವಾಗಿ ಸಾರಿಗೆ ಸಚಿವ ಮತ್ತು ಸಾರಿಗೆ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ನೀಡಿದ್ದಾರೆ.
300 ಕೋಟಿ ನಿಧಿ ಮಂಜೂರು: ನೌಕರರ ಸಂಘಗಳು ಆಕ್ರಮಣಕಾರಿ ನಿಲುವು ತಳೆದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನ್ನ ನಿರ್ಧಾರ ಪ್ರಕಟಿಸಿದೆ. ನವೆಂಬರ್ 2022 ರ ವೇತನವನ್ನು ಪಾವತಿಸಲು 300 ಕೋಟಿ ರೂಪಾಯಿ ನಿಧಿಯನ್ನು ಅನುಮೋದಿಸಿದೆ. ಸಾರಿಗೆ ಆಯುಕ್ತರು ಈ ಮೊತ್ತವನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಬೇಕೆಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಸಿಬ್ಬಂದಿಗಳ ಗ್ರಾಚುಟಿ ಪಾವತಿ ವಿಚಾರದಲ್ಲಿ ಯಾವುದೇ ಅಕ್ರಮ ಅವ್ಯವಹಾರ ನಡೆದಿಲ್ಲ: ಕೆಎಸ್ಆರ್ಟಿಸಿ