ಹೈದರಾಬಾದ್: ಕೋವಿಡ್ ಲಸಿಕೆ ಪಡೆದ 1 ವರ್ಷದೊಳಗೆಯೇ ದೇಹದಲ್ಲಿ ಲಸಿಕೆ ಪ್ರತಿರಕ್ಷೆ ಕಳೆದುಕೊಳ್ಳಲಿದೆ ಎಂಬ ವರದಿಗಳ ಬೆನ್ನಲ್ಲೇ 40 ವರ್ಷಕ್ಕೂ ಮೇಲ್ಪಟ್ಟವರು ಲಸಿಕೆಯಿಂದ ಹೆಚ್ಚಿಸಿಕೊಂಡಿರುವ ಪ್ರತಿರಕ್ಷೆಯನ್ನು ಕಳೆದುಕೊಂಡಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ.
ಎಐಜಿ ಹಾಸ್ಪಿಟಲ್ಸ್ ಸಂಸ್ಥೆ ಏಷ್ಯನ್ ಹೆಲ್ತ್‌ಕೇರ್ ಫೌಂಡೇಶನ್ ಜೊತೆಗೂಡಿ ಅಧ್ಯಯನ ನಡೆಸಿದ್ದು, 40 ವರ್ಷ ಮೇಲ್ಪಟ್ಟ ಪೂರ್ಣ ಲಸಿಕೆ ಪಡೆದವರು 6 ತಿಂಗಳ ಬಳಿಕ ದೇಹದಲ್ಲಿನ ಪ್ರತಿರಕ್ಷೆ ಕಳೆದುಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿನವರು ಅಧಿಕ ರಕ್ತದೊತ್ತಡ, ಮಧುಮೇಹದಂತಹ ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಎಂದು ವಿವರಿಸಿದೆ.
ಇವರು ಎರಡು ಡೋಸ್ ಲಸಿಕೆ ಪಡೆದ ಆರು ತಿಂಗಳ ನಂತರ ಗಮನಾರ್ಹವಾಗಿ ಕಡಿಮೆ ಪ್ರತಿಕಾಯ ಪ್ರತಿಕ್ರಿಯೆಯನ್ನು ಹೊಂದಿರುತ್ತಾರೆ. ಹೀಗಾಗಿ, SARS-CoV-2 ಸೋಂಕಿನ ಹೆಚ್ಚು ಅಪಾಯವನ್ನು ಹೊಂದಿರುತ್ತಾರೆ. ಆರು ತಿಂಗಳ ನಂತರ ಇಂತಹ ಜನರಿಗೆ ಬೂಸ್ಟರ್ ಅಗತ್ಯವನ್ನು ಸಂಶೋಧನೆಗಳು ಒತ್ತಿ ಹೇಳುತ್ತಿವೆ.
ಅದೃಷ್ಟವಶಾತ್ ವ್ಯಾಕ್ಸಿನೇಷನ್‌ನ ಪರಿಣಾಮ, ಕೋವಿಡ್ ರೂಪಾಂತರದ ಸ್ವಾಭಾವಿಕ ಗುಣಲಕ್ಷಣಗಳ ಜೊತೆಗೆ ಜನರಲ್ಲಿ ನೈಸರ್ಗಿಕ ರೋಗನಿರೋಧಕ ಶಕ್ತಿ ಸೇರಿದಂತೆ ಅನೇಕ ಅಂಶಗಳಿಂದಾಗಿ ರೋಗದ ತೀವ್ರತೆ ಸೌಮ್ಯವಾಗಿದೆ ಎಂದು ಎಐಜಿ ಆಸ್ಪತ್ರೆಗಳ ಅಧ್ಯಕ್ಷ ಡಾ. ಡಿ ನಾಗೇಶ್ವರ ರೆಡ್ಡಿ ತಿಳಿಸಿದ್ದಾರೆ.
ದೀರ್ಘಾವಧಿಯಲ್ಲಿ ಪ್ರಸ್ತುತ ಲಸಿಕೆಗಳ ಪರಿಣಾಮಕಾರಿತ್ವ ಅರ್ಥಮಾಡಿಕೊಳ್ಳುವ ಗುರಿಯನ್ನು ಅಧ್ಯಯನ ಹೊಂದಿದೆ. ಸಂಪೂರ್ಣ ಲಸಿಕೆ ಪಡೆದ 1,636 ಆರೋಗ್ಯ ಕಾರ್ಯಕರ್ತರನ್ನು ಬಳಸಿ ಅಧ್ಯಯನ ನಡೆಸಲಾಗಿದೆ. ಇಂತಹವರಿಗೆ ಆರಂಭಿಕ ಹಂತದಲ್ಲಿ ಬೂಸ್ಟರ್ ಅಗತ್ಯವಿದೆ ಎಂದು ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಮುಕ್ತ ಮಾರುಕಟ್ಟೆಗೆ ಡಿಜಿಸಿಐ ಶಿಫಾರಸು