ಅಗರ್ತಲಾ: ತ್ರಿಪುರಾದಲ್ಲಿ ಅರಣ್ಯ ಭೂಮಿ ಒತ್ತುವರಿ ವಿಚಾರಕ್ಕೆ ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಜನಾಂಗದವರ ಮಧ್ಯೆ ಮಾರಾಮಾರಿ ನಡೆದಿದೆ. ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿ 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಒಂದು ಪೊಲೀಸ್ ವಾಹನವನ್ನು ಬೆಂಕಿ ಹಚ್ಚಿ ಸುಡಲಾಗಿದೆ. ಘಟನೆಯ ಬಳಿಕ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಭೂಮಿಗಾಗಿ ನಡೆದ ಮಾರಾಮಾರಿ: ಅಲ್ಪಸಂಖ್ಯಾತ ಸಮುದಾಯದ ಜನರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಲ್ಲದೇ ಮನೆ ನಿರ್ಮಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಘರ್ಷಣೆ ನಡೆದಿದೆ. 200 ಜನರಿದ್ದ ಬುಡಕಟ್ಟು ಜನಾಂಗದ ಗುಂಪೊಂದು ಒತ್ತುವರಿ ಸ್ಥಳಕ್ಕೆ ಆಗಮಿಸಿ ತೆರವು ಮಾಡಲು ಸೂಚಿಸಿದೆ. ಈ ವೇಳೆ ನಡೆದ ವಾಗ್ವಾದದಲ್ಲಿ ಬುಡಕಟ್ಟು ಜನರು ಏಕಾಏಕಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಹಲ್ಲೆ ಮಾಡಿದರು. ಚಾಕು, ಹರಿತವಾದ ಆಯುಧಗಳಿಂದ ದಾಳಿ ಮಾಡಿದರು ಎಂದು ಸಂತ್ರಸ್ತರೊಬ್ಬರು ತಿಳಿಸಿದರು.
ಪೊಲೀಸರ ಮೇಲೆ ಆರೋಪ: ದಾಳಿ ನಡೆಯುತ್ತಿದ್ದರೂ ಅದನ್ನು ತಡೆಯದೇ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ. ಪೊಲೀಸರ ಮುಂದೆಯೇ ಆದಿವಾಸಿಗಳು ಹರಿತವಾದ ಆಯುಧಗಳಿಂದ ದಾಳಿ ನಡೆಸುತ್ತಿದ್ದರೂ ತಡೆಯಲಿಲ್ಲ ಎಂದು ಅಲ್ಪಸಂಖ್ಯಾತರು ದೂರಿದ್ದಾರೆ.
ಪೊಲೀಸರಿಗೂ ಗಾಯ: ಎರಡು ಗುಂಪುಗಳ ಮಧ್ಯೆ ನಡೆದ ಕಾದಾಟದಲ್ಲಿ 30ಕ್ಕೂ ಅಧಿಕ ಜನರು ಗಾಯಗೊಂಡರೆ, ಸ್ಥಳದಲ್ಲಿದ್ದ ಇಬ್ಬರು ಪೊಲೀಸರೂ ಗಾಯಗೊಂಡರು. ಈ ವೇಳೆ ಪೊಲೀಸ್ ವಾಹನಕ್ಕೂ ಬೆಂಕಿ ಹಚ್ಚಿ ಸುಟ್ಟು ಭಸ್ಮ ಮಾಡಲಾಗಿದೆ.
ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಜನಾಂಗದ ನಡುವಿನ ಕಾದಾಟಕ್ಕೆ ಬಿಜೆಪಿ ನಾಯಕನ ಕಿತಾಪತಿಯೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಅರಣ್ಯ ಪ್ರದೇಶದಿಂದ ಮುಸ್ಲಿಮರನ್ನು ಹೊರಹಾಕುವ ಕಾರಣಕ್ಕಾಗಿ ಬುಡಕಟ್ಟು ಜನಾಂಗದವರನ್ನು ಎತ್ತಿ ಕಟ್ಟಲಾಗಿದೆ ಎಂದು ಅಲ್ಲಿನ ಜನರು ದೂರಿದ್ದಾರೆ. ಘರ್ಷಣೆಯ ನಂತರ ಘಟನಾ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓದಿ: ಬ್ಯಾಂಕ್ಗೆ ವಂಚಿಸಿ ಹೆಂಡತಿ ಖಾತೆಗೆ 2ಕೋಟಿಗೂ ಹೆಚ್ಚು ಹಣ ವರ್ಗಾವಣೆ: ನಾಪತ್ತೆಯಾದ ಅಧಿಕಾರಿ!