ಸಿಲಿಗುರಿ, (ಪಶ್ಚಿಮ ಬಂಗಾಳ) : ಚಿರತೆಯನ್ನು ಬೇಟೆಯಾಡಿ ಅದನ್ನು ಕೊಂದು ಬಳಿಕ ಅದರ ಮಾಂಸವನ್ನು ಕಿರಾತಕರು ತಿಂದಿದ್ದಾರೆ. ಬಳಿಕ ಚಿರತೆ ಮಾಂಸದೊಂದಿಗೆ ಪಿಕ್ನಿಕ್ ಮಾಡಿದ್ದಾರೆ. ಆಮೇಲೆ ಚಿರತೆ ಉಗುರುಗಳು ಮತ್ತು ಚರ್ಮ ಮಾರಾಟ ಮಾಡಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಸಿಲಿಗುರಿಯಲ್ಲಿ ನಡೆದಿದೆ.
ಏನಿದು ಘಟನೆ : ಇತ್ತೀಚೆಗೆ ಚಿರತೆಯೊಂದು ಸತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಷಯ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ, ಸಶಸ್ತ್ರ ಗಡಿ ಪಡೆಗಳ ಗುಪ್ತಚರ ಇಲಾಖೆ ಮತ್ತು ಬಂದರು ಕಚೇರಿಯ ಗಮನಕ್ಕೆ ಬಂದಿತು. ಚಿತ್ರಗಳು ಕೈಗೆ ಬಂದ ತಕ್ಷಣ ಅವರು ತನಿಖೆಗೆ ಧಾವಿಸಿದರು. 15 ದಿನಗಳ ಸತತ ತನಿಖೆಯ ಬಳಿಕ ಕೊನೆಗೂ ಆರೋಪಿಗಳು ಪತ್ತೆಯಾಗಿದ್ದಾರೆ.
ಕಳೆದ 7ರಂದು ಚರ್ಮ ಮತ್ತು ಪಂಜಗಳ ಕಳ್ಳಸಾಗಣೆ ಯತ್ನ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಚಿರತೆ ಮಾಂಸ ತಿಂದ ಮೊದಲ ಪ್ರಕರಣ ಇದಾಗಿದೆ. ಚಿರತೆಯ ಚರ್ಮವನ್ನು ನೇಪಾಳಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಎಸ್‌ಎಸ್‌ಬಿ ಗುಪ್ತಚರ ಮೂಲಗಳು ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿತ್ತು.
ಸುದ್ದಿ ತಿಳಿಯುತ್ತಿದ್ದಂತೆ ಕಾರ್ಶಿಯಾಂಗ್ ಅರಣ್ಯ ವಿಭಾಗದ ಹ್ಯಾಂಗಿಂಗ್ ರೇಂಜ್, ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಮತ್ತು ಎಸ್‌ಎಸ್‌ಬಿ ಜಂಟಿಯಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಫನ್ಸಿಡೆವಾ ಬ್ಲಾಕ್‌ನ ಫೌಜಿಜ್ಯೊದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅದೇ ಬ್ಲಾಕ್‌ನ ರೇಲೈನ್‌ನ ನಿವಾಸಿಗಳಾದ ಮುಕೇಶ್ ಕೆರ್ಕೆಟ್ಟಾ ಮತ್ತು ಪಿತಾಲುಷ್ ಕೆರ್ಕೆಟ್ಟಾ ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿದರು. ಬಂಧಿತರಿಂದ ಚಿರತೆ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ.
ಅಧಿಕಾರಿಗಳು ಚರ್ಮದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ, ಚಿರತೆಯ ಉಗುರುಗಳು ಚರ್ಮದಿಂದ ಕಾಣೆಯಾಗಿದ್ದವು. ಬಳಿಕ ಇಬ್ಬರನ್ನು ಮತ್ತೊಮ್ಮೆ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಮಲ್ಬಜಾರ್‌ನ ರಾಣಿಚಿರ ಟೀ ಗಾರ್ಡನ್ ನಿವಾಸಿ ತಪಾಶ್ ಖುರಾ ಎಂಬ ಯುವಕನ ಹೆಸರು ಕೇಳಿ ಬಂತು. ಆತನನ್ನು ಸಹ ನಿನ್ನೆ ಮಧ್ಯಾಹ್ನ ಘೋಷ್ಪುಕುರ್ ಪ್ರದೇಶದಿಂದ ಅಧಿಕಾರಿಗಳು ಬಂಧಿಸಿದರು.
ಓದಿ: ಯಶಸ್ವಿಯಾಗಿ ಮುಕ್ತಾಯವಾದ ಆಪರೇಷನ್ ಗಂಗಾ : ಉಕ್ರೇನ್ನಿಂದ 63 ಬ್ಯಾಚ್ಗಳಲ್ಲಿ ಮರಳಿದ ವಿದ್ಯಾರ್ಥಿಗಳು
ಫಾರೆಸ್ಟ್ ರೇಂಜರ್ ಸೋನಮ್ ಭುಟಿಯಾ ಮಾತನಾಡಿ, ನಾವು ಸಾಮಾಜಿಕ ಜಾಲತಾಣಗಳಲ್ಲಿ ಸತ್ತ ಚಿರತೆಯೊಂದಿಗಿನ ಚಿತ್ರವನ್ನು ನೋಡಿದ ತಕ್ಷಣ ತನಿಖೆಯನ್ನು ಪ್ರಾರಂಭಿಸಿದ್ದೇವೆ. ದಾಳಿಯ ವೇಳೆ ಮೂವರನ್ನು ಬಂಧಿಸಲಾಗಿದೆ. ಅವರು ಚಿರತೆಯ ಮಾಂಸವನ್ನೂ ತಿಂದಿದ್ದಾರೆ ಎಂದು ನಾವು ಕೇಳಿದ್ದು ಇದೇ ಮೊದಲು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.
ಚರ್ಮದ ಗಾತ್ರವು 156 ಸೆಂ.ಮೀ ಉದ್ದ ಮತ್ತು 50 ಸೆಂ.ಮೀ ಅಗಲವಿದೆ. ಆದರೆ, ಬಂದರು ಕಚೇರಿ ಅಥವಾ ಪೊಲೀಸರ ಕಣ್ಣಿಗೆ ಮಣ್ಣೆರಚಲು ಮಾಂಸವನ್ನು ಬೇಯಿಸಿ ತಿಂದಿದ್ದಾರೆ ಎಂಬುದು ಅಧಿಕಾರಿಗಳ ಅಭಿಪ್ರಾಯ. ಬಂಧಿತರನ್ನು ಶನಿವಾರ ಸಿಲಿಗುರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.