ಅಹಮದಾಬಾದ್( ಗುಜರಾತ್): ರಾಜ್ಯದಲ್ಲೇ ಪ್ರಥಮ ಮತ್ತು ದೇಶದಲ್ಲಿ ನಾಲ್ಕನೇ ಪರವಾನಗಿ ಪಡೆದ ನಾಗರಿಕ ಮಹಿಳಾ ಸ್ಕೈಡೈವರ್ ಎಂಬ ಖ್ಯಾತಿಯನ್ನು ವಡೋದರಾದ 28 ವರ್ಷದ ಶ್ವೇತಾ ಪರ್ಮಾರ್ ಪಡೆದಿದ್ದಾರೆ.
ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದ ಪರ್ಮಾರ್, ನಿಮ್ಮೆಲ್ಲರ ಅಭಿನಂದನಾ ಸಂದೇಶಗಳನ್ನು ನಾನು ಸ್ವೀಕರಿಸಿದ್ದೇನೆ. ರಾಜ್ಯ ಮತ್ತು ದೇಶವೇ ಹೆಮ್ಮೆ ಪಡುವಂತಹ ಕೆಲಸಗಳನ್ನು ನಾನು ಮಾಡುತ್ತೇನೆ. ಅನೇಕರಿಗೆ ನಾನು ಸ್ಫೂರ್ತಿಯಾಗಲು ಪ್ರಯತ್ನಿಸುತ್ತೇನೆ. ಸ್ಕೈಡೈವಿಂಗ್ ವಿಶೇಷ ಅನುಭವವನ್ನು ನೀಡುತ್ತದೆ ಎಂದರು.
ರಿವರ್ ರಾಫ್ಟಿಂಗ್‌ನಂತಹ ಅನೇಕ ಸಾಹಸ ಚಟುವಟಿಕೆಗಳು ಈಗಾಗಲೇ ಸ್ಟ್ಯಾಚ್ಯೂ ಆಫ್ ಲಿಬರ್ಟಿಯಲ್ಲಿ ನಡೆಯುತ್ತಿವೆ. ಸ್ಕೈಡೈವಿಂಗ್ ಎನ್ನುವುದು ಯುವಕರನ್ನು ಮತ್ತು ಪ್ರವಾಸಿಗರನ್ನು ಸಾಕಷ್ಟು ಆಕರ್ಷಿಸುವ ಒಂದು ಚಟುವಟಿಕೆ. ಸ್ಕೈಡೈವಿಂಗ್ ಎಲ್ಲ ಸ್ಥಳಗಳಲ್ಲಿ ನಡೆಯುತ್ತಿಲ್ಲ. ಈ ಚಟುವಟಿಕೆಯನ್ನು ಸ್ಟ್ಯಾಚ್ಯೂ ಆಫ್ ಲಿಬರ್ಟಿಯಲ್ಲಿ ಶಾಶ್ವತವಾಗಿ ಪರಿಚಯಿಸಿದರೆ ಅದು ಪ್ರಸಿದ್ಧ ಸ್ಕೈಡೈವಿಂಗ್ ತಾಣವಾಗಬಹುದು ಎಂದು ಅವರು ಅಭಿಪ್ರಾಯ ಪಟ್ಟರು.
ಇನ್ನು ಭಾರತದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಚೆಲ್ ಥಾಮಸ್, ಶೀತಲ್ ಮಹಾಜನ್ ಮತ್ತು ಅರ್ಚನಾ ಸರ್ದಾನಾ ಅವರು ಸ್ಕೈಡೈವರ್ ಪರವಾನಗಿ ಪಡೆದಿದ್ದಾರೆ. ಇದೀಗ ಶ್ವೇತಾ ಪರ್ಮಾರ್ ಸಹ ಪರವಾನಗಿ ಪಡೆದಿದ್ದು, ದೇಶದಲ್ಲಿ ನಾಲ್ಕನೇ ಪರವಾನಗಿ ಪಡೆದ ನಾಗರಿಕ ಮಹಿಳಾ ಸ್ಕೈಡೈವರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.