ನವದೆಹಲಿ: ರಿಯಲ್ ಎಸ್ಟೇಟ್ ಕಂಪನಿ ಯುನಿಟೆಕ್ ಹಗರಣದ ಆರೋಪಿಗಳಾದ ಅಜಯ್ ಚಂದ್ರ ಮತ್ತು ಸಂಜಯ್ ಚಂದ್ರ ಅವರಿಗೆ ಸಹಾಯ ಮಾಡುತ್ತಿದ್ದ ಆರೋಪದ ಮೇಲೆ ತಿಹಾರ್ ಜೈಲಿನ 32 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ದೆಹಲಿ ಕಾರಾಗೃಹ ಇಲಾಖೆ ಇಂದು ತಿಳಿಸಿದೆ.
ತಿಹಾರ್ ಜೈಲಿನಿಂದಲೇ ಭ್ರಷ್ಟಾಚಾರ ನಡೆಸುತ್ತಿರುವ ಆರೋಪ ಅಜಯ್ ಚಂದ್ರ ಮತ್ತು ಸಂಜಯ್ ಚಂದ್ರ ಅವರ ಮೇಲಿತ್ತು. ಆ ಭ್ರಷ್ಟಾಚಾರಕ್ಕೆ ಜೈಲಿನ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದೂ ಕೂಡ ಆರೋಪ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಅಪರಾಧ ವಿಭಾಗವು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿತ್ತು.
ಸುಪ್ರೀಂ ಆದೇಶದ ಮೇರೆಗೆ ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ಅವರು ನಡೆಸಿದ ತನಿಖೆಯಲ್ಲಿ ಈ ಅಧಿಕಾರಿಗಳು ಅಜಯ್ ಚಂದ್ರ ಮತ್ತು ಸಂಜಯ್ ಚಂದ್ರ ಅವರಿಗೆ ಸಹಾಯ ಮಾಡಿದ್ದಾರೆ ಎಂಬ ವಿಚಾರ ತಿಳಿದು ಬಂದಿತ್ತು.
ಇದನ್ನೂ ಓದಿ: ವೈರಲ್ ವಿಡಿಯೋ: ಶೌಚಾಲಯದಲ್ಲಿ ಪತ್ತೆಯಾಯ್ತು ಬೃಹತ್ ಕಾಳಿಂಗ ಸರ್ಪ
ಸೆಪ್ಟೆಂಬರ್ 28 ರಂದು ಈ ಪ್ರಕರಣದ ತನಿಖಾ ವರದಿಯನ್ನು ಪೊಲೀಸ್ ಆಯುಕ್ತರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ನಂತರ ಅಕ್ಟೋಬರ್ 6 ರಂದು, ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸುಪ್ರೀಂ ಆದೇಶಿಸಿತ್ತು. ಅಕ್ಟೋಬರ್ 12 ರಂದು ಅಪರಾಧ ವಿಭಾಗದಿಂದ ಎಫ್ಐಆರ್ ದಾಖಲಾಗಿದೆ. ಮತ್ತು ಇಡೀ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗವೇ ಮಾಡುತ್ತಿದೆ.