ನವದೆಹಲಿ: ಕೊರೊನಾ ಎರಡನೇ ಅಲೆಯಲ್ಲಿ ದೇಶಾದ್ಯಂತ ಈವರೆಗೆ 270 ವೈದ್ಯರು ಬಲಿಯಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಿಳಿಸಿದೆ.
ಮೃತ ವೈದ್ಯರ ಪಟ್ಟಿಯಲ್ಲಿ ಮಾಜಿ ಐಎಂಎ ಅಧ್ಯಕ್ಷ ಡಾ ಕೆ ಕೆ ಅಗರ್ವಾಲ್ ಕೂಡ ಸೇರಿದ್ದಾರೆ. ಅವರು ಸೋಮವಾರ ಮಾರಣಾಂತಿಕ ವೈರಸ್ಗೆ ಬಲಿಯಾಗಿದ್ದಾರೆ. ಬಿಹಾರದಲ್ಲಿ ಗರಿಷ್ಠ 78 ವೈದ್ಯರು ಸಾವಿಗೀಡಾಗಿದ್ದು, ಉತ್ತರ ಪ್ರದೇಶ- 37, ದೆಹಲಿ-29 ಮತ್ತು ಆಂಧ್ರಪ್ರದೇಶ -22 ವೈದ್ಯರು ಸಾವಿಗೀಡಾಗಿದ್ದಾರೆ.
ಐಎಂಎ ನೋಂದಣಿಯ ಪ್ರಕಾರ, ಸಾಂಕ್ರಾಮಿಕ ರೋಗದ ಮೊದಲ ಅಲೆಯಲ್ಲಿ 748 ವೈದ್ಯರು ಬಲಿಯಾಗಿದ್ದರಂತೆ. ಕಳೆದ ವರ್ಷ, ಭಾರತದಾದ್ಯಂತ 748 ವೈದ್ಯರು ಕೊರೊನಾಗೆ ಬಲಿಯಾಗಿದ್ದರೆ, ಪ್ರಸ್ತುತ ಅಲೆಯಲ್ಲಿ ಅದರಲ್ಲೂ ಅಲ್ಪಾವಧಿಯಲ್ಲಿ, 270 ವೈದ್ಯರನ್ನು ದೇಶ ಕಳೆದು ಕೊಂಡಿದೆ.
ಸಾಂಕ್ರಾಮಿಕ ರೋಗದ ಎರಡನೇ ಅಲೆ ಎಲ್ಲ ಜನರಿಗೂ ಅದರಲ್ಲೂ ವಿಶೇಷವಾಗಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಅತ್ಯಂತ ಮಾರಕವಾಗಿದೆ ಎಂದು ಐಎಂಎ ಅಧ್ಯಕ್ಷ ಡಾ.ಜೆ.ಎ. ಜಯಲಾಲ್ ಹೇಳಿದರು.