ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಎಲ್ಒಸಿಯ( ಭಾರತ ಪಾಕ್ ಗಡಿ ನಿಯಂತ್ರಣ ರೇಖೆ) ಉದ್ದಕ್ಕೂ ಇರುವ ಲಾಂಚಿಂಗ್ ಪ್ಯಾಡ್ಗಳಲ್ಲಿ 250ರಿಂದ 300 ಭಯೋತ್ಪಾದಕರು ಒಳನುಸುಳಲು ಕಾಯುತ್ತಿದ್ದು, ಈ ಸವಾಲನ್ನು ಎದುರಿಸಲು ನಮ್ಮ ಸೈನಿಕರು ಸಜ್ಜಾಗಿದ್ದಾರೆ ಎಂದು ಬಿಎಸ್ಎಫ್ ಹೆಚ್ಚುವರಿ ಮಹಾನಿರ್ದೇಶಕ ಸುರಿಂದರ್ ಪವಾರ್ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಹುತಾತ್ಮರಾದ ಬಿಎಸ್ಎಫ್ ಯೋಧ ಸುದೀಪ್ ಸರ್ಕಾರ್ ಅವರ ಸಂತಾಪ ಸೂಚಕ ಸಭೆಯ ನಂತರ ಶ್ರೀನಗರದ ಬಿಎಸ್ಎಫ್ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಸುರಿಂದರ್ ಪವಾರ್ ಎಲ್ಒಸಿಯಲ್ಲಿ ಉಗ್ರಗಾಮಿ ಚಟುವಟಿಕೆಗಳು ನಿಂತಿಲ್ಲ, ನವೆಂಬರ್ನಲ್ಲಿ ಹಿಮಪಾತವಾಗುವುದಕ್ಕೆ ಮೊದಲು ಭಯೋತ್ಪಾದಕರು ಒಳನುಸುಳಬಹುದು. ಭಯೋತ್ಪಾದಕರ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಲು ಸೈನ್ಯ ಜಾಗರೂಕವಾಗಿರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
2019ರಲ್ಲಿ 140 ಭಯೋತ್ಪಾದಕರು ಒಳನುಸುಳಿದ್ದು, ಈ ವರ್ಷ ಕೇವಲ 25ರಿಂದ 30 ಉಗ್ರರು ಮಾತ್ರ ಒಳನುಸುಳುವ ಯತ್ನ ನಡೆಸಿದ್ದಾರೆ ಎಂದು ಸುರಿಂದರ್ ಪವಾರ್ ಹೇಳಿದರು.
ನವೆಂಬರ್ 7ರ ಮಧ್ಯರಾತ್ರಿಯಲ್ಲಿ ನಡೆದ ಗುಂಡಿನ ಕಾಳಗದ ವಿಚಾರವಾಗಿ ಮಾತನಾಡಿದ ಅವರು ಕಾನ್ಸ್ಟೇಬಲ್ ಸುದೀಪ್ ಹಾಗೂ ಕಾನ್ಸ್ಟೇಬರ್ ಅಬ್ದುಲ್ ನೇತೃತ್ವದ ತಂಡದ ತಲೆಮರೆಸಿಕೊಂಡಿದ್ದ ಭಯೋತ್ಪಾದಕರ ಮೇಲೆ ದಾಳಿ ನಡೆಸಿತ್ತು. ಈ ವೇಳೆ, ಕಾನ್ಸ್ಟೇಬಲ್ ಸುದೀಪ್ ಗಂಭೀರವಾಗಿ ಗಾಯಗೊಂಡು ಹುತಾತ್ಮರಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಈ ಘಟನೆ ನಡೆದ ನಡೆದ ಮರುದಿನವೇ ಸೇನೆ ಕಾರ್ಯಾಚರಣೆ ನಡೆಸಿ, ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಯಿತು