ಹೈದರಾಬಾದ್ (ತೆಲಂಗಾಣ): ಮಾಹಿತಿ ಮತ್ತು ತಂತ್ರಜ್ಞಾನ ಹೆಚ್ಚಾದಂತೆ ದಿನದಿಂದ ದಿನಕ್ಕೆ ಅದರ ದುರ್ಬಳಕೆ ಕೂಡ ಅಧಿಕವಾಗುತ್ತಿದೆ. ವಂಚಕರು ತಂತ್ರಜ್ಞಾನವನ್ನೇ ವೇದಿಕೆಯಾಗಿ ಮಾಡಿಕೊಂಡು ಹೊಸ-ಹೊಸ ಮೋಸದ ಜಾಲಗಳನ್ನು ಸೃಷ್ಟಿಸುತ್ತಿದ್ದಾರೆ. ಇದಕ್ಕೆ ತೆಲಂಗಾಣ ರಾಜಧಾನಿ ಹೈದರಾಬಾದ್ನಲ್ಲಿ ದಾಖಲಾಗಿರುವ ಸೈಬರ್ ವಂಚನೆ ಪ್ರಕರಣಗಳೇ ಸಾಕ್ಷಿ. ಕಳೆದ 9 ತಿಂಗಳ ಅವಧಿಯಲ್ಲಿ 2,232 ಪ್ರಕರಣಗಳನ್ನು ನಗರದ ಸೈಬರ್ ಕ್ರೈಂ ಪೊಲೀಸರು ದಾಖಲಿಸಿದ್ದಾರೆ. ಯಾವುದೋ ಆಸೆ-ಆಕಾಂಕ್ಷೆಗಾಗಿ ಜನರು ಮೋಸದ ಜಾಲಗಳಿಗೆ ಸಿಲುಕಿ ಬರೋಬ್ಬರಿ 102 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.
ಸೈಬರ್ ವಂಚಕರು ಪ್ರತಿಯೊಂದು ವಲಯ, ಕ್ಷೇತ್ರವನ್ನೂ ವ್ಯಾಪಿಸಿಕೊಂಡಿದ್ದಾರೆ. ಖಾಸಗಿ ಸಂಸ್ಥೆಗಳು ಮಾತ್ರವಲ್ಲದೇ ಸರ್ಕಾರಿ ಸಂಸ್ಥೆಗಳ ಹೆಸರಲ್ಲೂ ಜನರನ್ನು ವಂಚಿಸಿ ಹಣ ವಸೂಲಿ ಮಾಡುವ ದಂಧೆಗೆ ಇಳಿದಿದ್ದಾರೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಂತಹ ತಂತ್ರಜ್ಞಾನದ ವೇದಿಕೆಗಳನ್ನೇ ಬಳಕೆ ಮಾಡುತ್ತಿದ್ದಾರೆ. ವಾಟ್ಸಾಪ್ ಲಿಂಕ್‌ಗಳು, ರೀಲ್‌ಗಳು, ಸಂದೇಶಗಳು, ಆನ್‌ಲೈನ್ ಕಸ್ಟಮರ್ ಕೇರ್ ಸಂಖ್ಯೆಗಳ ಹೆಸರಲ್ಲಿ ಮೋಸದ ತಂತ್ರಗಳನ್ನು ಯಥೇಚ್ಚವಾಗಿ ಯಾವುದೇ ಲಂಗು-ಲಂಗಾಮುಗಳು ಇಲ್ಲದೇ ಅಳವಡಿಸಿಕೊಂಡಿದ್ದಾರೆ.
ಇಷ್ಟೇ ಅಲ್ಲ, ಬ್ಯಾಂಕ್‌ಗಳ ಸಂಖ್ಯೆಗಳು ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಎನ್ಐಎ ಹೆಸರು ಹೇಳಿಕೊಂಡು ಕೂಡ ಜನರನ್ನು ಸೈಬರ್ ಖದೀಮರು ವಂಚಿಸುತ್ತಿದ್ದಾರೆ. ಸೈಬರ್ ಕ್ರೈಂ ಪೋರ್ಟಲ್‌ಗಳನ್ನೂ ಸಹ ವಂಚಕರು ತಮ್ಮ ವಂಚನೆಗೆ ಬಳಸುತ್ತಿದ್ದಾರೆ. ಪೊಲೀಸ್ ಇಲಾಖೆಯ ದಾಖಲೆಗಳ ಪ್ರಕಾರ, ಸೈಬರ್ ಕ್ರಿಮಿನಲ್‌ಗಳು 27 ವಿವಿಧ ವೇದಿಕೆಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ.
9 ತಿಂಗಳಲ್ಲಿ 102 ಕೋಟಿ ರೂ. ವಂಚನೆ: ಹೈದಬಾರಾದ್ ನಗರದಲ್ಲಿ ಅಷ್ಟೇ ಕಳೆದ 9 ತಿಂಗಳ ಅವಧಿಯಲ್ಲಿ ಸೈಬರ್ ವಂಚನೆಗೆ ಸಂಬಂಧಿಸಿದ 2,232 ಪ್ರಕರಣಗಳನ್ನು ಸೈಬರ್ ಕ್ರೈಂ ಪೊಲೀಸರು ದಾಖಲಿಸಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲಿ ಬಹುತೇಕ ಜನರು ತಮ್ಮ ಹಣವನ್ನು ಕಳೆದುಕೊಂಡು ಮೋಸಕ್ಕೆ ಒಳಗಾಗಿದ್ದಾರೆ. ಇದರ ಮೊತ್ತ ಬರೋಬ್ಬರಿ 102,39,10,499 ರೂ.ಗಳಷ್ಟು ಆಗುತ್ತದೆ ಎಂದು ಪೊಲೀಸ್ ದಾಖಲೆಗಳಿಂದ ದೃಢಪಟ್ಟಿದೆ. ಹಾಗೆ ನೋಡಿದರೆ ಸುಮಾರು ಪ್ರತಿ ತಿಂಗಳಿಗೆ ಜನರಿಂದ 11 ಕೋಟಿ ರೂ.ಗಳಷ್ಟು ಹಣವನ್ನು ಸೈಬರ್ ವಂಚಕರು ಲೂಟಿ ಮಾಡುತ್ತಿದ್ದಾರೆ.
ಉದ್ಯೋಗದ ಹೆಸರಲ್ಲಿ ಹೆಚ್ಚು ಮೋಸ: ನಗರದ ಬಹುಪಾಲು ಜನರು ಹೆಚ್ಚು ಹಣವನ್ನು ಸುಲಭವಾಗಿ ಪಡೆಯುವ ಆಶಯದೊಂದಿಗೆ ಅರೆಕಾಲಿಕ ಉದ್ಯೋಗಗಳು/ಹೂಡಿಕೆಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಯಾವುದಾದರೂ ಮನೆಯಿಂದಲೇ ಉದ್ಯೋಗ ಮಾಡಬಹುದು ಎಂದು ಸಂದೇಶಗಳು ಕಂಡ ಕೂಡಲೇ ಅವುಗಳ ಮೊರೆ ಹೋಗುತ್ತಾರೆ. ಇದನ್ನೇ ಸೈಬರ್ ವಂಚಕರು ತಮ್ಮ ಬಂಡವಾಳ ಮಾಡಿಕೊಂಡಿದ್ದಾರೆ. ಇದೇ ರೀತಿಯಾಗಿ ಹೂಡಿಕೆಯ ಜಾಲದಲ್ಲಿ ಸಿಲುಕಿದ ಸುಮಾರು 1,018 ಮಂದಿ 69.60 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ ಎನ್ನುತ್ತವೆ ಪೊಲೀಸ್ ಇಲಾಖೆಯ ಮೂಲಗಳು.
ಹೆಚ್ಚಿನ ಆದಾಯ ಸಂದೇಶಗಳ ನಂಬಬೇಡಿ: ಆನ್‌ಲೈನ್ ವಹಿವಾಟುಗಳು ಹಾಗೂ ಆನ್‌ಲೈನ್ ವೇದಿಕೆಯಲ್ಲಿ ಹೆಚ್ಚಿನ ಲಾಭವಿದೆ ಎಂಬ ಭರವಸೆಯಲ್ಲಿ ಜನರು ಸುಲಭವಾಗಿ ವಂಚಕರಿಗೆ ಬಲಿಯಾಗುತ್ತಿದ್ದಾರೆ. ಯಾವುದೇ ವ್ಯಾಪಾರದಿಂದ ಬರುವಷ್ಟು ಆದಾಯವು ಅರೆಕಾಲಿಕ ಉದ್ಯೋಗಗಳಿಂದ ಬರುವುದಿಲ್ಲ ಎಂಬ ವಾಸ್ತವತೆ ಬಗ್ಗೆ ಜನತೆ ಯೋಚಿಸುತ್ತಿಲ್ಲ. ಆನ್‌ಲೈನ್‌ನಲ್ಲಿ ವಂಚನೆಗೊಳಗಾಗಿರುವುದು ಕಂಡುಬಂದರೆ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವಂತೆ ನಗರ ಕ್ರೈಂ ವಿಭಾಗದ ಜಂಟಿ ಆಯುಕ್ತ ಡಾ. ಗಜರಾವ್ ಭೂಪಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕಳೆದ 9 ತಿಂಗಳಲ್ಲಿ 12,615 ಸೈಬರ್ ಕ್ರೈಂ ಪ್ರಕರಣಗಳು ದಾಖಲು