ಚೆನ್ನೈ: ತಮಿಳುನಾಡಿನ 234 ವಿಧಾನಸಭೆ ಕ್ಷೇತ್ರಗಳಿಗೆ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ಎಲ್ಲ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ.
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕೆಲವೊಂದು ಕ್ಷೇತ್ರಗಳಲ್ಲಿ ಅಪಾರ ಪ್ರಮಾಣದ ನಗದು, ಮದ್ಯ ಹರಿದಾಡುತ್ತಿದ್ದು, ಚುನಾವಣಾಧಿಕಾರಿಗಳು ಕೋಟ್ಯಂತರ ರೂ. ನಗದು ಸೇರಿ ಬರೋಬ್ಬರಿ 217.35 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ 80.88 ಕೋಟಿ ರೂ. ನಗದು, 1.61 ಕೋಟಿ ರೂ. ಮೌಲ್ಯದ 1,18,524.37 ಲೀಟರ್ ಮದ್ಯ, 117 ಕೋಟಿ ರೂ. ಮೌಲ್ಯದ 404 ಕೆಜಿ ಬಂಗಾರ, 1.63 ಕೋಟಿ ರೂ. ಮೌಲ್ಯದ 229 ಕೆಜಿ ಬೆಳ್ಳಿ ವಶಕ್ಕೆ ಪಡೆದುಕೊಂಡಿದ್ದು, ಇದರ ಒಟ್ಟು ಮೌಲ್ಯ 217.35 ಕೋಟಿ ಆಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡು ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಎಐಎಡಿಎಂಕೆ ಈ ಸಲ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದು, ಡಿಎಂಕೆ ಕಾಂಗ್ರೆಸ್ನೊಂದಿಗೆ ಕೈ ಜೋಡಿಸಿ ಕಣಕ್ಕಿಳಿದಿದೆ.