ಹೈದರಾಬಾದ್: ಉಕ್ರೇನ್ನಲ್ಲಿ ಯುದ್ಧ ಆರಂಭವಾದ ನಂತರ ವಾಪಸ್ ಬಂದಿದ್ದ ಭಾರತದ 2000 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ತನ್ನ ದೇಶದ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ನೀಡಲು ಉಜ್ಬೆಕಿಸ್ತಾನ್ ಮುಂದೆ ಬಂದಿದೆ. ಉಕ್ರೇನ್‌ನಿಂದ ಹಿಂದಿರುಗಿದ ನಂತರ, ತಮ್ಮ ಶೈಕ್ಷಣಿಕ ವರ್ಷವನ್ನು ಕಳೆದುಕೊಂಡಿರುವ ಭಾರತದ ಸಾವಿರಾರು ಎಂಬಿಬಿಎಸ್ ವಿದ್ಯಾರ್ಥಿಗಳು ವಿವಿಧ ದೇಶಗಳ ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ಹೆಣಗಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಲ ದೇಶಗಳು ಈ ವಿದ್ಯಾರ್ಥಿಗಳನ್ನು ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಿಕೊಳ್ಳಲು ಮುಂದಾಗುತ್ತಿವೆ. ಕೇಂದ್ರ ಸರ್ಕಾರ ಈಗಾಗಲೇ ವಿವಿಧ ದೇಶಗಳಲ್ಲಿ ಶಿಕ್ಷಣ ಮುಂದುವರಿಸಲು ಅನುಮತಿ ನೀಡಿದೆ. ಇತ್ತೀಚೆಗೆ, ಉಜ್ಬೇಕಿಸ್ತಾನ್ ಭಾರತದೊಂದಿಗೆ ಸಹಿ ಮಾಡಿದ ಒಪ್ಪಂದದ ಭಾಗವಾಗಿ ತನ್ನ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದೆ.
ಭಾರತದಲ್ಲಿ ಉಜ್ಬೇಕಿಸ್ತಾನದ ರಾಯಭಾರಿ ದಿಲ್ಶೋದ್ ಅಖಾಟೋವ್ ಅವರು ಗುರುವಾರ ಅಧಿಕೃತವಾಗಿ ಈ ವಿಷಯದ ಘೋಷಣೆ ಮಾಡಿದರು. ಅಗತ್ಯವಿದ್ದರೆ ಇನ್ನೂ ಕೆಲವರನ್ನು ಸೇರಿಸಿಕೊಳ್ಳುವುದಾಗಿ ಭರವಸೆ ನೀಡಿದರು. ಹೈದರಾಬಾದ್‌ನ ಬೇಗಂಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಲವು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಕೂಡ ನೀಡಲಾಯಿತು.
ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಯಭಾರಿ ದಿಲ್ಶೋದ್ ಅಖಾಟೋವ್, ಉಜ್ಬೇಕಿಸ್ತಾನದ ವೈದ್ಯಕೀಯ ಉನ್ನತ ಶಿಕ್ಷಣ ಸಂಸ್ಥೆ (ಎಂಎಚ್‌ಇಐ) ಭಾರತೀಯ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ 2 ಸಾವಿರ ಸೀಟುಗಳನ್ನು ಹಂಚಿಕೆ ಮಾಡಿದೆ. ಭಾರತೀಯ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ಮಾರ್ಗಸೂಚಿಗಳ ಪ್ರಕಾರ, ವಿದ್ಯಾರ್ಥಿಗಳಿಗೆ 'ವಿದೇಶಿ ವೈದ್ಯಕೀಯ ಪದವೀಧರ ಪರವಾನಗಿ (ಎಫ್‌ಎಂಜಿಎಲ್)-2021' ನಿಯಮಗಳ ಪ್ರಕಾರ ಪ್ರವೇಶದ ಅವಕಾಶ ನೀಡಲಾಗುತ್ತಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಅಖಾಟೋವ್ ಹೇಳಿದರು. ಇದರ ಭಾಗವಾಗಿ ಉಜ್ಬೇಕಿಸ್ತಾನಿ ವೈದ್ಯಕೀಯ ತಂಡವು ಹೈದರಾಬಾದ್ ಮತ್ತು ದೆಹಲಿಯ ಎಐಜಿ, ಯಶೋದಾ ಮತ್ತು ಮೇದಾಂತ ಆಸ್ಪತ್ರೆಗಳಿಗೆ ಭೇಟಿ ನೀಡಿದೆ. ಎಂಬಿಬಿಎಸ್ ವಿದ್ಯಾರ್ಥಿಗಳ ಪೋಷಕರು ಅಖಾಟೋವ್ ಅವರನ್ನು ಸನ್ಮಾನಿಸಿದರು.
ಇದನ್ನೂ ಓದಿ: ಉಕ್ರೇನ್‌ನಿಂದ ತಾಯ್ನಾಡಿಗೆ ಮರಳಿದ ಚಿಕ್ಕಬಳ್ಳಾಪುರ ವಿದ್ಯಾರ್ಥಿನಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಕೃತಜ್ಞತೆ