ಔರಂಗಾಬಾದ್/ಮಹಾರಾಷ್ಟ್ರ: ''ಅಪ್ಪಾ...ನನ್ನನ್ನು ಕ್ಷಮಿಸಿ... ನನ್ನ ಸಾವಿಗೆ ಯಾರನ್ನೂ ದೂಷಿಸಬೇಡಿ'' ಎಂದು ವಿದ್ಯಾರ್ಥಿನಿವೋರ್ವಳು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಔರಂಗಾಬಾದ್ನ ಪೈಠಣ್ನ ಶಿವಾಜಿನಗರದಲ್ಲಿ ವರದಿಯಾಗಿದೆ. ಅಂಜಲಿ ಜಾಧವ್ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಶನಿವಾರ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಅಂಜಲಿ ಪೈಠಣ್ನ ಕಾಲೇಜಿನಲ್ಲಿ D.Ed ವ್ಯಾಸಂಗ ಮಾಡುತ್ತಿದ್ರು. ಅಂಜಲಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡ ಆಕೆಯ ಕಾಕಾಸಾಹೇಬ್ ಜಾಧವ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಶಿವಾಜಿನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಂಜಲಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆಕೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ಅಂಜಲಿ,'' ಅಪ್ಪಾ...ನನ್ನನ್ನು ಕ್ಷಮಿಸಿ... ನನ್ನ ಸಾವಿಗೆ ಯಾರನ್ನೂ ದೂಷಿಸಬೇಡಿ'' ಎಂದು ಬರೆದಿದ್ದಾಳೆ.
ಅಂಜಲಿ ಸಾವು ಕುಟುಂಬಸ್ಥರನ್ನು ದುಃಖದ ಕಡಲಲ್ಲಿ ಮುಳುಗಿಸಿದೆ. ಓದುವುದರಲ್ಲಿ ಸದಾ ಮುಂದಿದ್ದ ಆಕೆ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಕ್ಕೆ ಬಂದಿದ್ದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪಚೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.