ಸೂರತ್ (ಗುಜರಾತ್): ತಾಲೂಕಿನ ಆಲ್‌ಪಾಡ್ ಸಮೀಪದ ಕಡಲತೀರದಲ್ಲಿ ಭಾರೀ ಗಾತ್ರದ ತಿಮಿಂಗಲ ಪತ್ತೆಯಾಗಿದೆ. ಆಲ್‌ಪಾಡ್ ಕಡಲತೀರದ ಗ್ರಾಮವಾಗಿದ್ದು ಬೃಹದಾಕಾರದ ಮೀನುಗಳಿವೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು. ಆದರೆ, ಎಂದೂ ನೋಡಿರಲಿಲ್ಲ. ಅರಬ್ಬೀ ಸಮುದ್ರದಿಂದ ದಡಕ್ಕೆ ಹೊರಬಿದ್ದ ಈ ಬೃಹತ್ ಗಾತ್ರದ ಈ ಮೀನು ಕಂಡು ಆಶ್ಚರ್ಯಚಕಿತರಾದರು. ಅಲ್ಲದೇ ಅನುಮಾನ ನಿಜವಾಗಿದ್ದಕ್ಕೆ ಕೆಲವರು ಆ ಮೀನಿನ ಜೊತೆಗೆ ಫೋಟೋ ಹಾಗೂ ವಿಡಿಯೋ ಮಾಡಿಕೊಂಡರು. ಅದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿವೆ.
ಆಲ್‌ಪಾಡ್ ಸಮೀಪದ ಮೋರ್ ಎಂಬ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸಮುದ್ರದ ಅಲೆಯ ಹೊಡೆತಕ್ಕೆ ಈ ಮೀನು ದಡಕ್ಕೆ ಬಂದಿದೆ. ಸುಮಾರು 20 ಅಡಿ ಉದ್ದದ ಜೀವಂತ ತಿಮಿಂಗಲ ಇದಾಗಿದ್ದು, ಮೊದಲ ಬಾರಿ ಈ ಗಾತ್ರದ ಮೀನು ಕಂಡು ಸ್ಥಳೀಯರು ಕೂಡ ಬೆಚ್ಚಿಬಿದ್ದಿದ್ದಾರೆ. ಮೀನುಗಾರಿಕೆಗೆ ತೆರಳಿದ್ದ ಯುವಕರು ಸಂಜೆ ಮನೆಗೆ ವಾಪಸಾಗುತ್ತಿದ್ದಾಗ ಕಡಲತೀರದಲ್ಲಿ ಈ ಜೀವಂತ ಮೀನು ಪ್ರತ್ಯಕ್ಷವಾಗಿದ್ದು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಆಲ್‌ಪಾಡ್ ಅರಣ್ಯ ಇಲಾಖೆ ಅದನ್ನು ಮತ್ತೆ ಸಮುದ್ರಕ್ಕೆ ಕಳಿಸುವ ಯತ್ನ ಮಾಡಿದರು. ನೀರು ಕಡಿಮೆ ಇದ್ದುದರಿಂದ ದಡದಲ್ಲಿದ್ದ ಮೀನು ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿತ್ತು. ಅದನ್ನು ಕಂಡ ಅಲ್ಲಿದ್ದ ನೂರಾರು ಮೀನುಗಾರರು, ಅದಕ್ಕೆ ನೀರು ಹಾಕಿ ಜೀವ ಉಳಿಸುವ ಕೆಲಸ ಮಾಡಿದರು. ''ಎಲ್ಲರ ಸಹಕಾರದಿಂದ ಈ ಬೃಹತ್ ತಿಮಿಂಗಲವನ್ನು ಮತ್ತೆ ಸಮುದ್ರಕ್ಕೆ ಸೇರಿಸಲಾಗುವುದು'' ಎಂದು ಅರಣ್ಯ ಇಲಾಖೆಯ ದೀಪಕ್ ಪಟೇಲ್ ಮಾಹಿತಿ ನೀಡಿದ್ದಾರೆ.
''ಸುಮಾರು 20 ಅಡಿ ಉದ್ದವಿದ್ದು ಇದರ ತೂಕ ಎರಡು ಟನ್ ಇರುವ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ ಈ ಪ್ರಮಾಣದ ತಿಮಿಂಗಲನ್ನು ಅನ್ನು ಯಾವತ್ತೂ ಕಂಡಿರಲಿಲ್ಲ. ತೆರೆಯ ಹೊಡೆತಕ್ಕೆ ದಡಕ್ಕೆ ಬಂದು ಸೇರಿರಬಹುದು. ಗ್ರಾಮದ ಕಡಲತೀರದಲ್ಲಿ ಬೃಹದಾಕಾರದ ಮೀನು ಪತ್ತೆಯಾಗಿರುವ ಸುದ್ದಿ ಕೇಳುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಅದನ್ನು ಕಾಣಲು ಸಮುದ್ರತೀರಕ್ಕೆ ಆಗಮಿಸಿದ್ದದರು. ಅರಣ್ಯ ಇಲಾಖೆ ತಂಡ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಅದನ್ನು ಮತ್ತೆ ಸಾಗರಕ್ಕೆ ಬಿಡುವ ಕಾರ್ಯ ನಡೆದಿದೆ'' ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿನ ನೀಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಲ್ಲಿ 340 ಕೆಜಿ ತೂಕದ ಬೃಹತ್ ಮೀನು ನೋಡಲು ಮುಗಿಬಿದ್ದ ಜನ: ವಿಡಿಯೋ
ಇತ್ತೀಚೆಗಷ್ಟೇ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಬರೋಬ್ಬರಿ 340 ಕೆಜಿ ತೂಕದ ಬೃಹತ್ ಮೀನು ಕಂಡು ಬಂದಿತ್ತು. ಇದನ್ನೂ ನೋಡಲೆಂದೇ ನೂರಾರು ಜನ ಮುಗಿಬಿದ್ದಿದ್ದರು. ಉಪ್ಪಳ್ಳಿ ಬಡಾವಣೆಯ ಅಂಗಡಿಯೊಂದರಲ್ಲಿ ಮತ್ಸ್ಯ ಜಾತಿಯಲ್ಲೇ ಅಪರೂಪದ ತಳಿಯಾದ ಅಂಬೂರು ಸಮುದ್ರ ಮೀನನ್ನು ಕಂಡು ಜನರು ಅಚ್ಚರಿಗೊಂಡಿದ್ದರು. ಗ್ರಾಹಕರು ಸರತಿ ಸಾಲಲ್ಲಿ ನಿಂತು ಮೀನನ್ನು ಖರೀದಿಸಿದ್ದರು. ಅಂಗಡಿ ಮಾಲೀಕರು ಪ್ರತಿ ಕೆಜಿ ಮೀನಿಗೆ 600 ರೂಪಾಯಿ ನಿಗದಿಪಡಿಸಿದ್ದರು. ಗ್ರಾಹಕರ ಬೇಡಿಕೆ ಹೆಚ್ಚಾದಂತೆ ಒಂದು ಕೆಜಿಗೆ ಸಾವಿರ ರೂಪಾಯಿ ಮಾಡಿದರೂ ಗ್ರಾಹಕರು ಮೀನನ್ನು ಖರೀದಿಸಿ ಕೊಂಡೊಯ್ದಿದ್ದರು. ಅಲ್ಲದೆ ಬೃಹತ್ ಮೀನನ್ನು ಕಂಡ ಸಾರ್ವಜನಿಕರು, ತಮ್ಮ ಮೊಬೈಲಿನಲ್ಲಿ ಫೋಟೊವನ್ನು ಸೆರೆ ಹಿಡಿದುಕೊಂಡಿದ್ದರು.