ಜೋಧಪುರ್ (ರಾಜಸ್ಥಾನ): ಧ್ವಜದ ವಿಚಾರವಾಗಿ ಎರಡು ಗುಂಪುಗಳ ನಡುವೆ ರಾಜಸ್ಥಾನದ ಜೋಧಪುರ್ನಲ್ಲಿ ಗಲಾಟೆ ನಡೆದಿದ್ದು, ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತ, ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವಿ ಮಾಡಿದ್ದಾರೆ.
ಇಲ್ಲಿನ ಜಲೋರಿ ಗೇಟ್ನಲ್ಲಿ ಸೋಮವಾರ ಧ್ವಜ ಹಾರಿಸಲು ಕೆಲವರು ಯತ್ನಿಸಿದ್ದರು. ಇದನ್ನು ವ್ಯಕ್ತಿಯೊಬ್ಬ ವಿಡಿಯೋ ಮಾಡುತ್ತಿದ್ದಾಗ ಕೆಲ ಯುವಕರು ಬಂದು ಆತನಿಗೆ ಥಳಿಸಿದ್ದಾರೆ. ಇದನ್ನು ಗಮನಿಸಿದ ಇತರರು ಹಲ್ಲೆಗೊಳಗಾಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಆಗ ಅವರ ಮೇಲೂ ದಾಳಿ ಮಾಡಲಾಗಿದೆ. ಇದರಿಂದ ಎರಡು ಗುಂಪುಗಳ ಗಲಾಟೆ ಶುರುವಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಗಲಾಟೆಯ ಸುದ್ದಿ ತಿಳಿದ ರಾಜಸ್ಥಾನ ಸಶಸ್ತ್ರ ಪಡೆ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಎರಡು ಗಂಪುಗಳನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಆದರೆ, ತಡರಾತ್ರಿ ಮತ್ತೆ ಎರಡೂ ಗಂಪುಗಳು ಮರಳಿ ಬಂದು ವಾಗ್ವಾದ ನಡೆಸಿವೆ. ಹೀಗಾಗಿ ಜಲೋರಿ ಗೇಟ್ ಹಾಗೂ ಈದ್ಗಾ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.
ಆದರೂ, ಇಡೀ ರಾತ್ರಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿ ಕಲ್ಲು ತೂರಾಟವಾಗಿದೆ. ಆದ್ದರಿಂದ ಪೊಲೀಸರು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಈ ಘಟನೆಯಲ್ಲಿ ಉದಯ್ ಮಂದಿರ ಎಸ್ಎಚ್ಒ ಅಮಿತ್ ಸಿಹಾಗ್ ಮತ್ತು ಡಿಸಿಪಿ ಭುವನಭೂಷಣ ಯಾದವ್ ಗಾಯಗೊಂಡಿದ್ದಾರೆ. ಸದ್ಯ ಜಲೋರಿ ಗೇಟ್ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬ್ಯಾರಿಕೇಡ್ಗಳನ್ನು ಹಾಕಿ ಬಂದ್ ಮಾಡಲಾಗಿದೆ.
ಠಾಣೆ ಮುಂದೆ ಧರಣಿ: ರಾತ್ರಿಯೇ ಘಟನಾ ಸ್ಥಳಕ್ಕೆ ಆಗಮಿಸಿದ ಶಾಸಕರಾದ ಸೂರ್ಯಕಾಂತ ವ್ಯಾಸ ಮತ್ತು ಮೇಯರ್ ವನಿತಾ ಶೇಠ್ ಈ ಘಟನೆಯನ್ನು ಖಂಡಿಸಿ ಪೊಲೀಸ್ ಠಾಣೆ ಮುಂದೆ ರಾತ್ರಿ 2.30ರವರೆಗೆ ಧರಣಿ ಕುಳಿತಿದ್ದರು. ಜತೆಗೆ ಶಾಸಕರ ನಿವಾಸದ ಸಮೀಪ ಕೂಡ ಬೈಕ್ವೊಂದಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಹೇಳಲಾಗಿದೆ.
ಶಾಂತಿ-ಸುವ್ಯವಸ್ಥೆ ಕಾಪಾಡಿ: ಈ ಘಟನೆ ಬಗ್ಗೆ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದು, ಎರಡು ಗುಂಪುಗಳ ನಡುವಿನ ಗಲಾಟೆ ದುರದೃಷ್ಟಕರ. ಸ್ಥಳದಲ್ಲಿ ಶಾಂತಿ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಜತೆಗೆ ಕಾನೂನು ಹಾಗೂ ಸುವ್ಯವಸ್ಥೆ ಸ್ಥಾಪಿಸಲು ಎಲ್ಲ ಪಕ್ಷದವರು ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಆಂಧ್ರದ 10ನೇ ತರಗತಿ ಪರೀಕ್ಷೆಗಳಲ್ಲಿ ಅಕ್ರಮ: 42 ಶಿಕ್ಷಕರ ಬಂಧನ