ನವದೆಹಲಿ: ಭಾರತಕ್ಕೆ ಹೆರಾಯಿನ್ ಕಳ್ಳಸಾಗಾಣಿಕೆ ಮಾಡಲು ಪ್ರಯತ್ನಿಸಿದ ಆರೋಪದಲ್ಲಿ ಇಬ್ಬರು ಅಫ್ಘಾನ್ ಪ್ರಜೆಗಳನ್ನು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಇವರು ಅಂದಾಜು 53 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಶಾಂಪೂ ಮತ್ತು ಹೇರ್‌ಕಲರ್ ಬಾಟಲ್ಗಳಲ್ಲಿ ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದರು ಎಂದು ಕಸ್ಟಮ್ ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ರಾಜಧಾನಿ ತೆಹ್ರಾನ್ನಿಂದ ದುಬೈ ಮೂಲಕ ಆರೋಪಿಗಳು ದೆಹಲಿಗೆ ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಪ್ರಯಾಣಿಕರ ಬ್ಯಾಗ್ ಪರಿಶೀಲನೆ ಮಾಡುವಾಗ ಆರೋಪಿಗಳ ಬಳಿಯಿದ್ದ ಶಾಂಂಪೂ ಮತ್ತು ಹೇರ್ ಕಲರ್ ಬಾಟಲ್ಗಳಲ್ಲಿ ಕಪ್ಪು ಬಣ್ಣದ ದ್ರವ್ಯ ಪತ್ತೆಯಾಗಿದೆ. ಅದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಬಾದಾಮಿ ಪೊಲೀಸರ ಕಾರ್ಯಾಚರಣೆ; ಇಬ್ಬರು ಅಪ್ರಾಪ್ತರು ಸೇರಿ 6 ಮಂದಿ ಅಂತರ್ ರಾಜ್ಯ ದರೋಡೆಕೋರರ ಬಂಧನ
ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ಮಾದಕ ದ್ರವ್ಯ ಪತ್ತೆ ಪರೀಕ್ಷೆ ನಡೆಸಿದಾಗ ಅದರಲ್ಲಿ ಹೆರಾಯಿನ್ ಇರುವುದು ಗೊತ್ತಾಗಿದೆ. ಆರೋಪಿಗಳಿಂದ ಸುಮಾರು 7.62 ಕೆ.ಜಿಯಷ್ಟು ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಅದರ ಮೌಲ್ಯ 53.24 ಕೋಟಿ ರೂ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.