ಜಮ್ಮು: ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ನಾಯಕಿ ಮೆಹಬೂಬಾ ಸಯೀದ್ ಅವರ ಸಹೋದರಿ ರುಬೈಯಾ ಸಯೀದ್ ಇಂದು ಜಮ್ಮುವಿನಲ್ಲಿರುವ ವಿಶೇಷ ಟಾಡಾ ನ್ಯಾಯಾಲಯದ ಎದುರು ಹಾಜರಾಗಿ ವಿಚಾರಣೆ ಎದುರಿಸಿದರು. ಆರೋಪಿ ಜೆಕೆಎಲ್ಎಫ್ ಮುಖ್ಯಸ್ಥ ಯಾಸಿನ್ ಮಲಿಕ್, ರುಬೈಯಾ ಅವರನ್ನು ಅಕ್ಟೋಬರ್ 20 ರಂದು ಕ್ರಾಸ್ ಎಕ್ಸಾಮಿನೇಷನ್ ಮಾಡುವ ಸಾಧ್ಯತೆಯಿದೆ.
ಕೇಂದ್ರದ ಮಾಜಿ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಮಗಳೂ ಆಗಿರುವ ರುಬೈಯಾ ಸಯೀದ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ನ ಉಗ್ರವಾದಿಗಳು 1989ರ ಡಿಸೆಂಬರ್ 8 ರಂದು ಅಪಹರಣ ಮಾಡಿ, ಡಿಸೆಂಬರ್ 13 ರವರೆಗೆ ಒತ್ತೆಯಾಳಾಗಿರಿಸಿಕೊಂಡಿದ್ದರು. ಉಳಿದ ಆರೋಪಿಗಳೊಂದಿಗೆ ರುಬೈಯಾ ಅವರ ಕ್ರಾಸ್ ಎಕ್ಸಾಮಿನೇಷನ್ ಮುಗಿಸಲಾಗಿದೆ ಎಂದು ಸಿಬಿಐ ವಕೀಲೆ ಮೋನಿಕಾ ಕೊಹ್ಲಿ ಹೇಳಿದರು.
ರುಬೈಯಾರನ್ನು ಅಪಹರಿಸಿದ ಪ್ರಕರಣದಲ್ಲಿ ಜೈಲಿನಲ್ಲಿದ್ದ ಐವರು ಉಗ್ರವಾದಿಗಳನ್ನು ಬಿಡಲಾಗಿತ್ತು. 1989ರ ಅಪಹರಣ ಪ್ರಕರಣದಲ್ಲಿ ಜೆಕೆಎಲ್ಎಫ್ ಮುಖ್ಯಸ್ಥ ಮಲಿಕ್ ಮತ್ತು ಇತರ ಮೂವರು ತನ್ನನ್ನು ಅಪಹರಿಸಿದ್ದರು ಎಂದು ರುಬೈಯಾ 15, ಜುಲೈ 2022 ರಂದು ಗುರುತಿಸಿದ್ದರು. ಇದಾದ ನಂತರ ತಿಹಾರ್ ಜೈಲಿನಲ್ಲಿರುವ ಮಲಿಕ್ ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ಆರಂಭಿಸಿ, ಜಮ್ಮು ಕೋರ್ಟ್ಗೆ ತಮ್ಮನ್ನು ದೈಹಿಕವಾಗಿ ಹಾಜರುಪಡಿಸಬೇಕೆಂದು ಮತ್ತು ರುಬೈಯಾರನ್ನು ಕ್ರಾಸ್ ಎಕ್ಸಾಮಿನೇಷನ್ ಮಾಡಲು ತಮಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದರು.
ಈ ವರ್ಷ ಅಕ್ಟೋಬರ್ 20 ರಂದು ಮಲಿಕ್ ಅವರನ್ನು ಕ್ರಾಸ್ ಎಕ್ಸಾಮಿನೇಶನ್ ಗೆ ಕರೆತರಲಾಗುವುದು. ನ್ಯಾಯಾಲಯವು ಯಾಸಿನ್ ಮಲಿಕ್ರನ್ನು ಹಾಜರು ಪಡಿಸುವಂತೆ ತಿಹಾರ್ ಜೈಲಿಗೆ ಪ್ರೊಡಕ್ಷನ್ ವಾರಂಟ್‌ಗಳನ್ನು ನೀಡಿದೆ. ಅವರ ಬೇಡಿಕೆಗಳ ಪ್ರಕಾರ ಅವರು ವಿಚಾರಣೆಗೆ ದೈಹಿಕವಾಗಿ ಹಾಜರಾಗಲಿದ್ದಾರೆ ಎಂದು ವಕೀಲೆ ಕೊಹ್ಲಿ ಹೇಳಿದರು.
ಇದನ್ನು ಓದಿ:ಭಾಗಶಃ ರಷ್ಯಾ ಸೇನೆ ಯುದ್ಧ ಸನ್ನದ್ಧಗೊಳಿಸಲು ಪುಟಿನ್ ಆದೇಶ