ನವದೆಹಲಿ: 1988ರ ರಸ್ತೆಯಲ್ಲಿ ದಾಂದಲೆ (ರೋಡ್ ರೇಜ್) ಪ್ರಕರಣಕ್ಕೆ ಸಂಬಂಧಿಸಿದಂತೆ 34 ವರ್ಷಗಳ ನಂತರ ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ಈಗಾಗಲೇ ಸುಪ್ರೀಂಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣದಲ್ಲಿ ತಮಗೆ ವಿಧಿಸಲಾದ ಶಿಕ್ಷೆಗೆ ಒಳಪಡಲು ಕೆಲವು ವಾರಗಳ ಕಾಲಾವಕಾಶ ಕೋರಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಇಂದು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಮಾಜಿ ಕ್ರಿಕೆಟಿಗ ಕೋರ್ಟ್‌ಗೆ ಶರಣಾಗಲು ಕೆಲವು ವಾರಗಳ ಅಗತ್ಯವಿದೆ ಎಂದು ನ್ಯಾಯಮೂರ್ತಿ ಎ.ಎಂ ಖಾನ್ವಿಲ್ಕರ್ ನೇತೃತ್ವದ ಪೀಠದ ಮುಂದೆ ಹಿರಿಯ ವಕೀಲ ಎ.ಎಂ.ಸಿಂಘ್ವಿ ಸಿಧು ಪರ ವಿಷಯ ಪ್ರಸ್ತಾಪಿಸಿದರು. ಅವರು ಶೀಘ್ರದಲ್ಲೇ ಶರಣಾಗುತ್ತಾರೆ. ಆದ್ರೆ ಕೆಲವು ವಾರಗಳ ಅಗತ್ಯವಿದೆ. ಇದು 34 ವರ್ಷಗಳ ನಂತರ ಬಂದ ತೀರ್ಪು. ಕಕ್ಷಿದಾರರು ತಮ್ಮ ವೈದ್ಯಕೀಯ ವ್ಯವಹಾರಗಳನ್ನು ಸಂಘಟಿಸಲು ಬಯಸುತ್ತಿದ್ದಾರೆ ಎಂದು ಸಿಂಘ್ವಿ ಪೀಠಕ್ಕೆ ಮನವಿ ಮಾಡಿದರು.
ನೀವು ಅರ್ಜಿ ಸಲ್ಲಿಸಬಹುದು. ಅದನ್ನು ಮುಖ್ಯ ನ್ಯಾಯಾಧೀಶರ ಮುಂದೆ ನಮೂದಿಸಬಹುದು. ಮುಖ್ಯ ನ್ಯಾಯಮೂರ್ತಿಗಳು ಇಂದು ಆ ಪೀಠವನ್ನು ರಚಿಸಿದರೆ, ನಾವು ಪರಿಗಣಿಸುತ್ತೇವೆ. ಒಂದು ವೇಳೆ ಆ ಪೀಠ ರಚಸದಿದ್ದರೆ ಅದಕ್ಕಾಗಿ ವಿಶೇಷ ಪೀಠ ರಚಿಸಬೇಕಾಗುತ್ತದೆ ಎಂದು ಪೀಠ ಸಿಂಘ್ವಿಗೆ ತಿಳಿಸಿದರು. ಮುಖ್ಯ ನ್ಯಾಯಾಧೀಶರ ಮುಂದೆ ವಿಷಯ ಪ್ರಸ್ತಾಪಿಸಲು ಪ್ರಯತ್ನಿಸುವುದಾಗಿ ಸಿಂಘ್ವಿ ಹೇಳಿದರು.
ಇದನ್ನೂ ಓದಿ: 34 ವರ್ಷಗಳ ಹಿಂದಿನ ಪ್ರಕರಣ: ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು ಶಿಕ್ಷೆ
1988 ರ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ 34 ವರ್ಷಗಳ ನಂತರ ಮಾಜಿ ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ಸುಪ್ರೀಂಕೋರ್ಟ್ ಗುರುವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಎಸ್ಕೆ.ಕೌಲ್ ಅವರಿದ್ದ ಪೀಠ, ರಸ್ತೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸಿಧು ಅವರನ್ನು ಆರೋಪಮುಕ್ತಗೊಳಿಸಿದ್ದ ಮೇ 2018ರ ಆದೇಶವನ್ನು ಮರುಪರಿಶೀಲಿಸಿ ತೀರ್ಪು ನೀಡಿದೆ.
ಈ ಹಿಂದೆ ಸಿಧುಗೆ ಸಾವಿರ ರೂಪಾಯಿ ದಂಡ ವಿಧಿಸಿ ಆರೋಪಮುಕ್ತಗೊಳಿಸಲಾಗಿತ್ತು. ಆದರೆ 65 ವರ್ಷದ ಸಂತ್ರಸ್ತೆಯ ಕುಟುಂಬ ಇದನ್ನು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಐಪಿಸಿ ಸೆಕ್ಷನ್ 323ರ ಅಡಿಯಲ್ಲಿ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಸಿಧುಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಪಂಜಾಬ್ ಮತ್ತು ಹರಿಯಾಣ ಕೋರ್ಟ್ ತೀರ್ಪುನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಆದರೆ ಹಿರಿಯ ನಾಗಕರಿಕರಿಗೆ ನೋವುಂಟು ಮಾಡಿದ ಆರೋಪದಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸದೆ 1 ಸಾವಿರ ರೂಪಾಯಿ ದಂಡ ವಿಧಿಸಿತ್ತು.
ಸಿಧು 1988ರಲ್ಲಿ ರಸ್ತೆಯಲ್ಲಿ ದಾಂಧಲೆ ನಡೆಸಿ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧ ಮೃತಪಟ್ಟಿದ್ದರು. ಬಳಿಕ ಈ ಪ್ರಕರಣ ಸುಪ್ರೀಂಕೋರ್ಟ್ ತಲುಪಿತ್ತು.