ಮುಂಬೈ(ಮಹಾರಾಷ್ಟ್ರ): ಶಿಕ್ಷಕರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ ಆರೋಪದ ಮೇರೆಗೆ ಮಹಾರಾಷ್ಟ್ರದ ಕಾಲೇಜೊಂದರ ಬಿಕಾಂ ದ್ವಿತೀಯ ವರ್ಷದ 180 ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಮುಂಬೈನ ವಿಲೆಪಾರ್ಲೆಯಲ್ಲಿರುವ ನಾರ್ಸಿ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ವಿರುದ್ಧ ಈ ಕ್ರಮ ಕೈಗೊಂಡಿದೆ.
ಅನುಚಿತವಾಗಿ ವರ್ತಿಸುತ್ತಿದ್ದ ಬಿಕಾಂ ಎರಡನೇ ವರ್ಷ ಓದುತ್ತಿರುವ 180 ವಿದ್ಯಾರ್ಥಿಗಳನ್ನೂ ಅಮಾನತು ಶಿಕ್ಷೆಗೆ ಒಳಪಡಿಸಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ಅಮಾನತಾದ ವಿದ್ಯಾರ್ಥಿಗಳಲ್ಲಿ ಬಿಕಾಂ ದ್ವಿತೀಯ ವರ್ಷದ ಎ, ಬಿ, ಸಿ ಮೂರು ವರ್ಗಗಳ ವಿದ್ಯಾರ್ಥಿಗಳಿದ್ದಾರೆ. ಈ ಸಂಬಂಧ ಮಾರ್ಚ್ 24 ರಂದು ಎಲ್ಲ ವಿದ್ಯಾರ್ಥಿಗಳಿಗೆ ನೋಟಿಸ್ ಸಹ ನೀಡಲಾಗಿದೆ ಎಂದು ತಿಳಿಸಿದೆ.
ವಿದ್ಯಾರ್ಥಿಗಳ ವಿರುದ್ಧ ಶಿಕ್ಷಣ ಸಂಸ್ಥೆಯ ಕ್ರಮಕ್ಕೆ ಟೀಕೆ ವ್ಯಕ್ತವಾಗಿದೆ. ಇದಕ್ಕೆ ಉತ್ತರ ನೀಡಿರುವ ಸಂಸ್ಥೆ, ''ಅಮಾನತುಗೊಂಡಿರುವ ವಿದ್ಯಾರ್ಥಿಗಳು ಕಾಲೇಜಿಗೆ ಸರಿಯಾಗಿ ಹಾಜರಾಗುತ್ತಿಲ್ಲ. ಇದು ಶೈಕ್ಷಣಿಕ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಶಿಕ್ಷಕರ ಜೊತೆಗೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ ಬಗ್ಗೆ ಹಲವು ಬಾರಿ ನೋಟಿಸ್ ಕೂಡ ನೀಡಲಾಗಿತ್ತು. ಆದರೆ, ಇದನ್ನು ಸುಧಾರಿಸಿಕೊಳ್ಳದ ವಿದ್ಯಾರ್ಥಿಗಳು ತಪ್ಪು ನಡೆ ಮುಂದುವರಿಸಿದ್ದರು. ಈ ಬಗ್ಗೆ ದೂರುಗಳು ಹೆಚ್ಚಿದ್ದವು ಎಂದಿದೆ.
ಕ್ಲಾಸಿನಲ್ಲಿ ವಿದ್ಯಾರ್ಥಿಗಳ ಗಲಾಟೆ: ಇದಲ್ಲದೇ, ಪ್ರಾಧ್ಯಾಪಕರು ತರಗತಿಯಲ್ಲಿ ಪವರ್ ಪಾಯಿಂಟ್ ಪ್ರೆಸೆಂಟೇಶನ್(ಪಿಪಿಟಿ) ಮೂಲಕ ಪಾಠ ಮಾಡುವಾಗ ವಿದ್ಯಾರ್ಥಿಗಳು ಮೇರೆ ಮೀರಿ ವರ್ತಿಸಿದ್ದಾರೆ. ಶಿಕ್ಷರೊಬ್ಬರು ತರಗತಿಯಲ್ಲಿ ನೀಡುತ್ತಿದ್ದ ಪಿಪಿಟಿ ಪಾಠದ ವೇಳೆ ವಿದ್ಯಾರ್ಥಿಯೊಬ್ಬ ತನ್ನಲ್ಲಿದ್ದ ಮೊಬೈಲ್ ಬಳಸಿ ಪರದೆಯ ಮೇಲೆ ಸಿನಿಮಾದ ಹಾಡುಗಳನ್ನು ಪ್ರದರ್ಶಿಸಿದ್ದಾನೆ. ಹೀಗೆ ಮಾಡಿದ ವಿದ್ಯಾರ್ಥಿಯನ್ನು ಶಿಕ್ಷಕರು ಕ್ಲಾಸಿನಿಂದ ಹೊರಹೋಗಲು ಹೇಳಿದ್ದಾರೆ. ಹೊರ ಹೋಗಿ ಮತ್ತೆ ಬಂದ ಆತ ಶಿಕ್ಷಕನ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾನೆ.
ಇದಕ್ಕೆ ಇತರ ವಿದ್ಯಾರ್ಥಿಗಳು ಬೆಂಬಲ ನೀಡಿದ್ದಾರೆ. ಇಂತಹ ಘಟನೆಗಳು ಹಲವು ಬಾರಿ ಕಾಲೇಜಿನಲ್ಲಿ ನಡೆದಿದ್ದವು. ಈ ಬಗ್ಗೆ ಶಿಕ್ಷಕರು ಮಕ್ಕಳ ಮೇಲೆ ದೂರು ಕೂಡ ನೀಡಿದ್ದರು. ಕ್ರಮಕ್ಕೆ ಎಚ್ಚರಿಕೆ ನೀಡಿದಾಗ್ಯೂ ವಿದ್ಯಾರ್ಥಿಗಳು ತಪ್ಪು ತಿದ್ದಿಕೊಳ್ಳದ ಕಾರಣ ಅವರ ಮೇಲೆ ಅಮಾನತಿನ ಕ್ರಮ ಜರುಗಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಕ್ರಮಕ್ಕೆ ಒಳಗಾದ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಬಗ್ಗೆ ನಮಗೂ ಕಾಳಜಿ ಇದೆ. ಆದರೆ, ವಿದ್ಯಾರ್ಥಿಗಳ ವರ್ತನೆ ತಕ್ಕುದಲ್ಲ. ಓರ್ವ ವಿದ್ಯಾರ್ಥಿ ಮಾಡಿದ ತಪ್ಪನ್ನು ಕ್ಲಾಸಿನ ಉಳಿದವರು ಬೆಂಬಲಿಸಿ ತಪ್ಪು ಮಾಡಿದ್ದಾರೆ. ಯಾವುದೇ ಸಂಸ್ಥೆ ತನ್ನ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ಆದರೆ, ಎಲ್ಲ ಮೇರೆ ಮೀರಿದ ಕಾರಣ ಕ್ರಮ ಅನಿವಾರ್ಯವಾಗಿತ್ತು ಎಂದು ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
ಪೋಷಕರ ಟೀಕೆ; ಇನ್ನು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ವಿರುದ್ಧ ಕೈಗೊಂಡ ಕ್ರಮಕ್ಕೆ ಪೋಷಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಮಕ್ಕಳ ಶೈಕ್ಷಣಿಕ ಜೀವನಕ್ಕೆ ಇದು ಅಡ್ಡಿಯಾಗಲಿದೆ ಎಂದು ಹೇಳಿದ್ದಾರೆ.
ಓದಿ: ತಮ್ಮನ ಉಳಿಸಲು ಹೋಗಿ ಬಲಿಯಾದ ಅಣ್ಣ: ಸಂಧಾನಕ್ಕೆ ಬಂದವನನ್ನೇ ಬೆಂಕಿ ಹಚ್ಚಿ ದಹಿಸಿದ ಆರೋಪ