ಮುಂಬೈ(ಮಹಾರಾಷ್ಟ್ರ): ಕಮಿಷನ್ ಆಸೆಗೆ 16 ಕೆಜಿ ತೂಕದ 80 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಸಾಗಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಆದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಬಂಧಿಸಿದೆ.
ಬಿನು ಜಾನ್ ಬಂಧಿತ ಆರೋಪಿ. ವಿದೇಶದಿಂದ ಅಕ್ರಮವಾಗಿ ಡ್ರಗ್ಸ್ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಲಗೇಜ್ ಟ್ರಾಲಿಯಲ್ಲಿ ರಹಸ್ಯವಾಗಿ ಅಡಗಿಸಿಟ್ಟ ಡ್ರಗ್ಸ್ ಪತ್ತೆಯಾಗಿದೆ. ಉತ್ತಮ ಗುಣಮಟ್ಟದ 16 ಕೆಜಿ ಹೆರಾಯಿನ್ ಇದಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 80 ಕೋಟಿ ರೂಪಾಯಿ ಮೌಲ್ಯವುಳ್ಳದ್ದು ಎಂದು ಅಂದಾಜಿಸಲಾಗಿದೆ. ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ವಿದೇಶಿ ಪ್ರಜೆಯೊಬ್ಬರಿಗೆ ಸೇರಿದ ಹೆರಾಯಿನ್ ಇದಾಗಿದ್ದು, 1 ಸಾವಿರ ಅಮೆರಿಕ ಡಾಲರ್ ಕಮಿಷನ್ಗಾಗಿ ತಾನು ಇದನ್ನು ಸಾಗಣೆ ಮಾಡುತ್ತಿರುವುದಾಗಿ ಆರೋಪಿ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ. ಇತರೆ ಆರೋಪಿಗಳ ಹೆಸರನ್ನೂ ಸಹ ಬಹಿರಂಗಪಡಿಸಿದ್ದು, ಅವರುಗಳು ಮತ್ತು ಬಂಧಿತ ಜಾನ್ ಈ ಹಿಂದೆ ಭಾರತದಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದನೇ ಎಂಬುದರ ಜಾಡು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಓದಿ: ಹಗಲಲ್ಲೇ ಮನೆಗೆ ನುಗ್ಗಿ ಪದವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ.. ಕತ್ತು ಹಿಸುಕಿ ಕೊಂದ ದುರುಳ