ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಆನೆ ದಾಳಿಯಿಂದ 1,581 ಜನರು ಮೃಪಟ್ಟಿದ್ದಾರೆ. ಅದೇ ಅವಧಿಯಲ್ಲಿ ಹುಲಿ ದಾಳಿಯಿಂದ 207 ಮಂದಿ ಸಾವಿಗೀಡಾಗಿದ್ದಾರೆ ಎಂದು ಸರ್ಕಾರ ಶುಕ್ರವಾರ ರಾಜ್ಯಸಭೆಯಲ್ಲಿ ತಿಳಿಸಿದೆ. ಮಾನವ-ವನ್ಯಜೀವಿ ಸಂಘರ್ಷದ ಘಟನೆಗಳು ದೇಶದ ವಿವಿಧ ಭಾಗಗಳಿಂದ ವರದಿಯಾಗಿದೆಯೇ ಎಂದು ಸಂಸದ ಡಿ.ವೀರೇಂದ್ರ ಹೆಗ್ಗಡೆ ಕೇಳಿದ ಪ್ರಶ್ನೆಗೆ ಸರ್ಕಾರ ಉತ್ತರಿಸಿದೆ. ಹೌದು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಈ ಮಾಹಿತಿಯನ್ನು ರಾಜ್ಯಸಭೆಯಲ್ಲಿ ಹಂಚಿಕೊಂಡಿದ್ದಾರೆ.
ಆನೆ ದಾಳಿಯಿಂದ ಮೃತಪಟ್ಟವರು ಎಷ್ಟು?: ಕಳೆದ ಮೂರು ವರ್ಷಗಳಲ್ಲಿ ಮಾನವ - ವನ್ಯಜೀವಿ ಸಂಘರ್ಷದ ಘಟನೆಗಳ ಬಗ್ಗೆ ಸಚಿವರು, ರಾಜ್ಯವಾರು ಅಂಕಿ- ಅಂಶಗಳನ್ನು ಮಾಹಿತಿ ತಿಳಿಸಿದರು. ಅವರು ನೀಡಿದ ಇಲಾಖೆಯ ಅಂಕಿ - ಅಂಶಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಆನೆಗಳ ದಾಳಿಯಿಂದ ಒಟ್ಟು 1,581 ಜನರು ಸಾವಿಗೀಡಾಗಿದ್ದಾರೆ. 2019ರಲ್ಲಿ 585, 2020ರಲ್ಲಿ 461 ಮತ್ತು 2021ರಲ್ಲಿ 535 ಸೇರಿದಂತೆ ಒಟ್ಟು 1,581 ಜನರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ: 2 ವರ್ಷದ ಮಗುವಿನ ಮೇಲೆ ಕ್ರಿಮಿನಲ್ ಕೇಸ್! ಕೋರ್ಟ್ ಹೇಳಿದ್ದೇನು ಗೊತ್ತೇ?
ಆನೆ ದಾಳಿಗೆ ನಲುಗಿದ ಒಡಿಶಾ: 2019ರಲ್ಲಿ 117, 2020ರಲ್ಲಿ 93 ಮತ್ತು 2021ರಲ್ಲಿ 112 ಆನೆಗಳ ದಾಳಿಯಿಂದ 322 ಸಾವಿಗೀಡಾಗಿದ್ದು, ಹೆಚ್ಚಿನ ಸಾವಿನ ಪ್ರಕರಣಗಳು ಒಡಿಶಾ ರಾಜ್ಯದಲ್ಲಿ ದಾಖಲಾಗಿವೆ. ನಂತರ ಜಾರ್ಖಂಡ್‌ನಲ್ಲಿ 291 ಸಾವುಗಳು ಸಂಭವಿಸಿದ್ದು, 2019ರಲ್ಲಿ 84, 2020ರಲ್ಲಿ 74 ಮತ್ತು 2021ರಲ್ಲಿ 133 ಮಂದಿ ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 240 ಜನರು ಸಾವಿಗೀಡಾಗಿದ್ದು, 2019ರಲ್ಲಿ 116, 2020 ರಲ್ಲಿ 47, 2021ರಲ್ಲಿ 77 ಸಾವುಗಳು ಆಗಿವೆ.
ಇದನ್ನೂ ಓದಿ: ಸಿಕ್ಕಿಂನಲ್ಲಿ ಭಾರಿ ಹಿಮಪಾತ.. 15 ಕಿ.ಮೀಟ್ರಾಫಿಕ್ ಜಾಮ್, ಒಂದು ಸಾವಿರ ಪ್ರವಾಸಿಗರನ್ನ ರಕ್ಷಿಸಿದ ಸೇನೆ
ಹುಲಿ ದಾಳಿಯಿಂದ ಮೃತಪಟ್ಟವರು ಎಷ್ಟು?: ಹುಲಿ ದಾಳಿಯಿಂದ ಎಷ್ಟು ಜನರು ಮೃತಪಟ್ಟಿದ್ದಾರೆ ಎಂಬುದರ ಬಗ್ಗೆ ಸಚಿವರು ಹಂಚಿಕೊಂಡ ಮಾಹಿತಿ ಇಲ್ಲಿದೆ ಗಮನಿಸಿ. ಹುಲಿ ದಾಳಿಯಿಂದ ಕಳೆದ ಮೂರು ವರ್ಷಗಳಲ್ಲಿ 207 ಜನರು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. 2020ರಲ್ಲಿ 44, 2021ರಲ್ಲಿ 57 ಮತ್ತು 2022ರಲ್ಲಿ 106 ಸಾವುಗಳು ಸಂಭವಿಸಿವೆ.
ಹುಲಿ ದಾಳಿಗೆ ಮಹಾರಾಷ್ಟ್ರ ತತ್ತರ: ಹುಲಿ ದಾಳಿಯಿಂದ ಅತಿ ಹೆಚ್ಚು ಸಾವುಗಳು ಮಹಾರಾಷ್ಟ್ರದಲ್ಲಿ ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 141 ಜನರು ಹುಲಿ ದಾಳಿಯಿಂದ ಮೃತಪಟ್ಟಿದ್ದಾರೆ. 2020ರಲ್ಲಿ 25, 2021ರಲ್ಲಿ 32 ಮತ್ತು 2022ರಲ್ಲಿ 84 ಜನರು ಸಾವಿಗೀಡಾಗಿದ್ದಾರೆ. ಉತ್ತರ ಪ್ರದೇಶದಲ್ಲಿ 29 ಮಂದಿ ಮೃತಪಟ್ಟಿದ್ದಾರೆ. 2020ರಲ್ಲಿ 4, 2021ರಲ್ಲಿ 11, 2022ರಲ್ಲಿ 14 ಸಾವುಗಳು ಸಂಭವಿಸಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗಂಗೋತ್ರಿ ರಾಷ್ಟ್ರೀಯ ಉದ್ಯಾನದಲ್ಲಿ ಅಪರೂಪದ ಹಿಮ ಚಿರತೆ ಪ್ರತ್ಯಕ್ಷ