ಕೋಲ್ಕತ್ತಾ: ಭಾರತೀಯ ಜನತಾ ಪಾರ್ಟಿಯಿಂದ ತೃಣಮೂಲ ಕಾಂಗ್ರೆಸ್ ಸೇರಿರುವ 150 ಕಾರ್ಯಕರ್ತರಿಗೆ ಪಕ್ಷ ವಿಭಿನ್ನವಾಗಿ ಬರಮಾಡಿಕೊಂಡಿದೆ. ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಈ ಘಟನೆ ನಡೆದಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲು ಮಾಡಿದ್ದು, ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡಿದೆ. ಇದರ ಬೆನ್ನಲೇ ಅನೇಕರು ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಸೇರಿಕೊಳ್ಳುತ್ತಿದ್ದಾರೆ. ಇಂದು ಕೂಡ 150 ಬಿಜೆಪಿ ಕಾರ್ಯಕರ್ತರು ಟಿಎಂಸಿ ಸೇರಿದ್ದು, ಅವರಿಗೆ ಈ ರೀತಿಯಾಗಿ ವೆಲ್ಕಮ್ ಮಾಡಿಕೊಳ್ಳಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಬಿಜೆಪಿಯಿಂದ ಟಿಎಂಸಿ ಸೇರಿದ್ದ ಆರು ಕಾರ್ಯಕರ್ತರು ತಮ್ಮ ತಲೆ ಬೋಳಿಸಿಕೊಂಡಿದ್ದರು. ಇದೀಗ 150 ಬಿಜೆಪಿ ಕಾರ್ಯಕರ್ತರು ಪಕ್ಷ ಸೇರಿಕೊಳ್ಳುವುದಕ್ಕೂ ಮುಂಚಿತವಾಗಿ ಸ್ಯಾನಿಟೈಸ್ ಮಾಡಿ, ಟಿಎಂಸಿ ಬಾವುಟ ನೀಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದಕ್ಕೂ ಮುಂಚಿತವಾಗಿ ಅನೇಕ ಮುಖಂಡರು, ಕಾರ್ಯಕರ್ತರು ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಆದರೆ, ಚುನಾವಣೆಯಲ್ಲಿ ಸೋಲು ಕಾಣುತ್ತಿದ್ದಂತೆ ಇದೀಗ ಎಲ್ಲರೂ ಮಾತೃಪಕ್ಷದತ್ತ ಮುಖ ಮಾಡುತ್ತಿದ್ದಾರೆ.