ನವೀ ಮುಂಬೈ(ಮಹಾರಾಷ್ಟ್ರ): ಓದುವ ವಿಚಾರಕ್ಕೆ ನಡೆದಿರುವ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾರಾಷ್ಟ್ರದ ನವೀ ಮುಂಬೈನಲ್ಲಿ ನಡೆದಿದೆ. ಈಗಾಗಲೇ ಬಾಲಕಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆಕೆಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
15 ವರ್ಷದ ಬಾಲಕಿ ತನ್ನ 41 ವರ್ಷದ ತಾಯಿಯನ್ನ ಕರಾಟೆ ಬೆಲ್ಟ್ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದು, ಇದಾದ ಬಳಿಕ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾಳೆಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ. ಈ ಘಟನೆ ಮಹಾರಾಷ್ಟ್ರದ ಏರೋಲಿಯಲ್ಲಿ ನಡೆದಿದ್ದು, ರಬಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
15 ವರ್ಷದ ಮಗಳನ್ನ ವೈದ್ಯಕೀಯ ಕೋರ್ಸ್ಗೆ ಸೇರಿಸಬೇಕೆಂದು ತಾಯಿ ಹಾಗೂ ತಂದೆಯ ಕನಸಾಗಿತ್ತು. ಇದಕ್ಕಾಗಿ NEET ತರಬೇತಿಗೆ ಪ್ರವೇಶ ಸಹ ತೆಗೆದುಕೊಂಡಿದ್ದರು. ಕಳೆದ ಜುಲೈ 27ರಂದು ಮಗಳು ಮೊಬೈಲ್ ಹಿಡಿದು ಕುಳಿತಿದ್ದರಿಂದ ಆಕೆಯನ್ನ ತರಾಟೆಗೆ ತೆಗೆದುಕೊಂಡು ಬೈಯ್ದಿದ್ದಾರೆ. ಇದರಿಂದ ಕೋಪಗೊಂಡಿರುವ ಮಗಳು, ಅಲ್ಲೇ ಸ್ವಲ್ಪ ದೂರದಲ್ಲಿರುವ ಚಿಕ್ಕಪ್ಪನ ಮನೆಗೆ ತೆರಳಿದ್ದಾಳೆ.
ಅಲ್ಲಿಗೆ ತೆರಳಿರುವ ತಾಯಿ ಮಗಳನ್ನ ವಾಪಸ್ ಕರೆದುಕೊಂಡು ಬರಲು ಹೋಗಿದ್ದಾಳೆ. ಈ ವೇಳೆ, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ನೀವೂ ನನಗೆ ಕಿರುಕುಳ ನೀಡುತ್ತಿದ್ದೀರೆಂದು ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಹೇಳಿದ್ದಾಳೆ. ಇದರಿಂದ ಮತ್ತಷ್ಟು ಕೋಪಗೊಂಡಿರುವ ತಾಯಿ, ಮಗಳನ್ನ ಕರೆದುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ಬುದ್ಧಿವಾದ ಹೇಳಿರುವ ಪೊಲೀಸರು ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿರಿ: ಬಾಲಕಿ ರೇಪ್, ಕೊಲೆ ಪ್ರಕರಣ: ಕೇಜ್ರಿವಾಲ್ ಸರ್ಕಾರದಿಂದ 10 ಲಕ್ಷ ರೂ.ಪರಿಹಾರ
ಜುಲೈ 30ರಂದು ಮತ್ತೊಮ್ಮೆ ಓದುವ ವಿಚಾರವಾಗಿ ತಾಯಿ - ಮಗಳ ನಡುವೆ ಜಗಳವಾಗಿದೆ. ಈ ವೇಳೆ, ಕೈಯಲ್ಲಿ ಚಾಕು ಹಿಡಿದುಕೊಂಡಿರುವ ತಾಯಿ ಮಗಳನ್ನ ಹೆದರಿಸಿದ್ದಾಳೆ. ತಾಯಿ ನನ್ನನ್ನು ಕೊಲೆ ಮಾಡುತ್ತಾಳೆಂದು ಊಹಿಸಿರುವ ಮಗಳು ಆಕೆಯನ್ನ ಕೆಳಗೆ ದೂಡಿದ್ದಾಳೆ. ಇದರಿಂದ ತಲೆಗೆ ಪೆಟ್ಟು ಬಿದ್ದಿದ್ದು, ಪ್ರಜ್ಞೆ ತಪ್ಪಿದ್ದಾಳೆ. ಈ ವೇಳೆ, ಮನೆಯಲ್ಲಿದ್ದ ಕರಾಟೆ ಬೆಲ್ಟ್ನಿಂದ ತಾಯಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.ಪೊಲೀಸರು ಪ್ರಶ್ನೆ ಮಾಡಿದಾಗ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾಳೆಂದು ಸುಳ್ಳು ಹೇಳಿದ್ದಾಳೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ವರದಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಸಾಬೀತುಗೊಂಡಿದೆ. ಬಾಲಕಿಯನ್ನ ಮತ್ತೊಮ್ಮೆ ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಬಹಿರಂಗಗೊಂಡಿದೆ. ಹೀಗಾಗಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಬಾಲಕಿ ತಂದೆ ಎಂಜಿನಿಯರ್ ಆಗಿದ್ದು, ತಾಯಿ ಗೃಹಣಿಯಾಗಿದ್ದರು. ಮಗಳನ್ನ ವೈದ್ಯಕೀಯ ಕೋರ್ಸ್ಗೆ ಸೇರಿಸಬೇಕು ಎಂಬ ಆಸೆ ಇಟ್ಟುಕೊಂಡಿದ್ದರು.