ಪಶ್ಚಿಮ ಮೇದಿನಿಪುರ್ (ಪಶ್ಚಿಮ ಬಂಗಾಳ): ಫ್ಯಾನ್ಸಿ ಹೇರ್ ಕಟಿಂಗ್ ಮಾಡಿಸಿದ್ದರಿಂದ ತಂದೆ ಬೈದ ಎಂಬ ಕಾರಣಕ್ಕೆ 8ನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ್ ಜಿಲ್ಲೆಯಲ್ಲಿ ನಡೆದಿದೆ. ಜಯಜಿತ್ ಪುರಿಯಾ ಎಂಬಾತನೇ ಸಾವಿಗೆ ಶರಣಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಡಿಸೆಂಬರ್ 9ರಂದು ಜಯಜಿತ್ ಫ್ಯಾನ್ಸಿ ಹೇರ್ ಕಟಿಂಗ್ ಮಾಡಿಸಿಕೊಂಡು ಮನೆಗೆ ಹೋಗಿದ್ದ. ಇದನ್ನು ಗಮನಿಸಿದ ತಂದೆ ಶ್ಯಾಮಪದ ಪುರಿಯಾ ಓರ್ವ ವಿದ್ಯಾರ್ಥಿಯಾಗಿ ಈ ರೀತಿ ಕ್ಷೌರ ಮಾಡಿಸುವುದು ಸೂಕ್ತವಲ್ಲ ಎಂದು ಬುದ್ಧಿವಾದ ಹೇಳಿದ್ದರು. ಆದರೆ, ತಂದೆ ಬೈದಿರುವುದೇ ಅವಮಾನ ಎಂದು ಭಾವಿಸಿದ ಜಯಜಿತ್ ಭಾನುವಾರ ಮಧ್ಯಾಹ್ನ ಮನೆಯ ಎರಡನೇ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುತ್ರ ಜಯಜಿತ್ ಈ ದುಡುಕಿನ ನಿರ್ಧಾರವು ತಂದೆ ಶ್ಯಾಮಪಾದ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರನ್ನು ಆಘಾತಕ್ಕೊಳಗಾಗುವಂತೆ ಮಾಡಿದೆ. ಅಂತಹ ಸಣ್ಣ ವಿಷಯಕ್ಕೆ ಅವನು ತನ್ನ ಜೀವವನ್ನೇ ಕೊನೆಗೊಳಿಸಿಕೊಳ್ಳುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ಸದ್ಯ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕ್ಯಾಂಟರ್ ಹಾಗೂ ಆಟೋ ನಡುವೆ ಡಿಕ್ಕಿ.. ರಿಕ್ಷಾ ಚಾಲಕ ಸೇರಿ ಮೂವರು ದುರ್ಮರಣ