ಜಲ್ಪೈಗುರಿ: ಪಶ್ಚಿಮ ಬಂಗಾಳದಲ್ಲಿ ಕಲ್ಲು ತುಂಬಿ ಸಾಗುಸುತ್ತಿದ್ದ ಟ್ರಕ್ಗೆ ರಾಂಗ್ ರೂಟ್ನಲ್ಲಿ ಬಂದ ಮೂರು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಗಳವಾರ-ಬುಧವಾರ ನಡುವಿನ ರಾತ್ರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ಬಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ವಾಂಗ್‌ದೇವ್ ಭುಟಿಯಾ ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ಟ್ರಕ್ ಚಾಲಕನದು ಯಾವುದೇ ತಪ್ಪಿಲ್ಲ. ರಾತ್ರಿ ವೇಳೆ ಟ್ರಕ್ ಎದುರಾಗಿ ಒಟ್ಟು ಆರು ವಾಹನಗಳು ರಾಂಗ್ ರೂಟ್ನಲ್ಲಿ ಚಲಿಸಿವೆ. ಮಂಜು ಕವಿದ ಕಾರಣ ವಾಹನಗಳಿಗೆ ಎದುರಿಗೆ ಬರುತ್ತಿದ್ದ ಟ್ರಕ್ ಕಾಣಿಸಿಲ್ಲ ಎಂದು ಹೇಳಿದರು.
ಎಲ್ಲ ವಾಹನಗಳು ವೇಗವಾಗಿ ಚಲಿಸುತ್ತಿದ್ದು, ಅದರಲ್ಲಿ ಕಾರ್ವೊಂದು ಟ್ರಕ್ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದಿದೆ. ಇದರಿಂದ ಟ್ರಕ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ಡಿವೈಡರ್ಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಒಂದರಂತೆ ಒಂದು ವಾಹನಗಳು ಟ್ರಕ್ಗೆ ಡಿಕ್ಕಿ ಹೊಡೆದಿದ್ದಾವೆ. ಹೀಗಾಗಿ ಲಾರಿ ಎರಡು ಕಾರ್ಗಳು ಮೇಲೆ ಬಿದ್ದಿದೆ. ಪರಿಣಾಮ ಈ ಅಪಘಾತದಲ್ಲಿ ಇಲ್ಲಿಯವರೆಗೆ 14 ಜನ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಸಂಭವಿಸಿದ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ 11 ಜನ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸ್ ಇಲಾಖೆ ಮಾಹಿತಿ ರವಾನಿಸಿದ್ದರು. ಸುದ್ದಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯ ಕೈಗೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಮಾಹಿತಿ ಪ್ರಕಾರ ಕಾರಿನಲ್ಲಿ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದರು ಎನ್ನಲಾಗುತ್ತಿದೆ. ಮೃತಪಟ್ಟವರಲ್ಲಿ ಹೆಚ್ಚಾಗಿ ಮಕ್ಕಳು ಮತ್ತು ಮಹಿಳೆಯರಿದ್ದಾರೆ. ತಮ್ಮವರನ್ನು ಕಳೆದುಕೊಂಡವರ ರೋದನೆ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಶೋಕದ ವಾತವರಣ ನಿರ್ಮಾಣವಾಗಿದೆ. ಆಸ್ಪತ್ರೆಗೆ ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮೃತ ಕುಟುಂಬಗಳಿಗೆ ಸಾಂತ್ವನ ಹೇಳುತ್ತಿದ್ದಾರೆ.
ಈ ಘಟನೆ ಕುರಿತು ದುಫ್ಗುರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.